Index   ವಚನ - 73    Search  
 
ಒಂದೇ ಆಗಿರ್ದ ಪರಶಿವನು ಮೂರಾಗಿ ಮೂರರಿಂದೆ ಪೂಜೆಗೊಂಡು ಎರಡಾಗಿ ಮೂರು ಎರಡು ಭೇದವಿಲ್ಲದೆ ಒಂದಾಗಿ ತೋರಿದಿರಿ. ಅದೆಂತೆಂದೊಡೆ: ಅಖಂಡ ಪರಶಿವನ ಭೇದಿಸಿ ಕಾಂಬಲು ತೋರಿದ ನಾದವೇ ಗುರುವಾಗಿ, ಬಿಂದುವೆ ಲಿಂಗವಾಗಿ, ಕಳೆಯೇ ಜಂಗಮವಾಗಿ, ಸುಜಲವೆ ಪಾದೋದಕವಾಗಿ, ತಿಳಿಯೇ ಪ್ರಸಾದವಾಗಿ, ಕಾಣಿಸುವ ಸುಪ್ರಕಾಶದ ತೇಜಪುಂಜವೆ ಶ್ರೀವಿಭೂತಿಯಾಗಿ, ಸೂರ್ಯ ಚಂದ್ರಾದಿಗಳೆ ರುದ್ರಾಕ್ಷಿಮಣಿಯಾಗಿ, ಪಿಂಡಬ್ರಹ್ಮಾಂಡಕೊಂದೆ ಎನಿಸಿದ ಓಂಕಾರವೆ ಸರ್ವಮಂತ್ರಗಳ ಶ್ರೇಷ್ಠ ಆದಿಮಂತ್ರವೆನಿಸಿ, ಬ್ರಹ್ಮಾಂಡ ಅಷ್ಟಾವರಣದ ಇನ್ನೊಂದು ಪರಿಯಾಗಿ ತೋರಿ, ಹಲವು ಪರಿಯಲಿ ಲೀಲೆಯಾಗಿ ಮೆರೆದ ಹಲವು ಹಲವಲ್ಲದೆ ಹಲವು ಒಂದಾಗಿ, ಒಂದೆ ತಾನಾದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.