Index   ವಚನ - 74    Search  
 
ಸದ್‍ಭಕ್ತನ ಸತ್ಕ್ರಿಯವೆ ಗುರುವೆನಿಸಿ, ಮಂಗಳ ಅಂಗಪೀಠದ ಮುಹೂರ್ತಗೊಂಡ ಹರರೂಪವೇ ಲಿಂಗವೆನಿಸಿ, ಲಿಂಗನ ಪೂಜಿಸುವ ಸದಾಚಾರವೇ ಜಂಗಮವೆನಿಸಿ, ಪಾದ್ಯದಲ್ಲಿ ಪಾದೋದಕವಾಗಿ, ಜಿಹ್ವೆಯಲ್ಲಿ ಪ್ರಸಾದವಾಗಿ, ಲಲಾಟದಲ್ಲಿ ವಿಭೂತಿಧಾರಣವಾಗಿ, ಉರ, ಸಿರ, ಕಂಠದಲ್ಲಿ ಶಿವಾಕ್ಷಿಮಣಿಯೆನಿಸಿ, ಶ್ರೋತ್ರದಲ್ಲಿ ಮಂತ್ರವಾಗಿ ಇಂತು ಇವು ಬಾಹ್ಯ ಅಷ್ಟಾವರಣದ ಕ್ರಮವೆನಿಸಿತ್ತು. ಇನ್ನು ಅಂತರಂಗದಿ ಆತ್ಮನ ಅರುವೆ ಗುರುವೆನಿಸಿತ್ತು. ಪ್ರಾಣವೆ ಲಿಂಗವಾಗಿ ತೋರಿತ್ತು. ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮವೆನಿಸಿತ್ತು. ಜಿಹ್ವಾಗ್ರವೇ ಪಾದೋದಕವಾಗಿ, ನಾಶಿಕವೆ ಪ್ರಸಾದವಾಗಿ, ತ್ವಕ್ಕಿನಲ್ಲಿ ಶ್ರೀವಿಭೂತಿ, ನೇತ್ರದಲ್ಲಿ ಪರಾಕ್ಷಮಣಿ, ಕರ್ಣದ್ವಾರದೊಳು ಮೊಳಗುವ ಮಂತ್ರದಿಂದೆ ಕೂಡಿಕೊಂಡ ಈ ಪರಿಯೇ ಅಂತರಾತ್ಮಷ್ಟಾವರಣವೆನಿಸಿತು. ನೀನೊಂದು ಇದ್ದು ಇಂತುಪರಿಯಲ್ಲಿ ಪೂಜೆ ಪೂಜಕ ಪೂಜ್ಯನೆನಿಸಿ ಮೆರೆದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.