Index   ವಚನ - 78    Search  
 
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಭಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಸೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಬೆಳಗಿನ ಬೆಳಗು ಅದ್ವಯಾದಿ ನಿಜಮುಕ್ತಿ ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವರ್ಧಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |