ಅಷ್ಟಭೂಮಿಯ ಮಧ್ಯದಲ್ಲಿ ಹುಟ್ಟಿತೊಂದು ಬೆಟ್ಟ.
ತಳಸೂಜಿಯ ಮೊನೆಯಗಲ
ಹಣೆ ಲೆಕ್ಕಕ್ಕೆ ಬಾರದ ವಿಸ್ತೀರ್ಣ.
ಆ ವಿಸ್ತೀರ್ಣದಲ್ಲಿ ಹುಟ್ಟಿದರು ಮೂವರು ಮಕ್ಕಳು:
ಒಬ್ಬ ಹೇಮವರ್ಣ, ಒಬ್ಬ ಕಪೋತವರ್ಣ,
ಒಬ್ಬ ಶ್ವೇತ ವರ್ಣ.
ಈ ಮೂವರು ಮಕ್ಕಳ ತಾಯಿ:
ಒಬ್ಬಳಿಗೆ ಬಾಯಿಲ್ಲ, ಒಬ್ಬಳಿಗೆ ನಾಲಗೆಯಿಲ್ಲ,
ಒಬ್ಬಳಿಗೆ ಹಲ್ಲಿಲ್ಲ.
ಇಂತೀ ಮೂವರು ಕೂಡಿ ಮಾತಾಡುತ್ತಿದ್ದರು.
ಮಾತಾಡುವುದ ಕಂಡು, ಇದೇತರ ಮಾತೆಂದು
ಅಡಗಿದ ಗುಡಿಯೊಳಗೆ.
ಅಡಗಿದ, ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.