ಕಾಲನ ಗೆದ್ದೆಹೆನೆಂದು ಮಾಡಿ ಬೇಡದ ನಿತ್ಯಾರ್ಚನೆ.
ಘಟಲಿಂಗಕ್ಕೆ ಹೊತ್ತಿನ ಗೊತ್ತಿನ ಕಟ್ಟುಂಟೆ?
ಕತ್ತಲೆಯ ಮನೆಯಲ್ಲಿ ಕುಳಿತು ಸಕ್ಕರೆಯ ಮೆದ್ದಡೆ,
ಕತ್ತಲೆಗೆ ಅಂಜಿ ಮೆತ್ತನಾಯಿತ್ತೆ ಸಕ್ಕರೆಯ ಮಧುರ?
ಚಿತ್ತದ ಪ್ರಕೃತಿ ಹಿಂಗಿ,
ನಿಶ್ಚಯ ನಿಜ ನೆಮ್ಮುಗೆಯಲ್ಲಿ ಮಾಡುವಡೆ,
ಚಿತ್ತದಲ್ಲಿ ಅಚ್ಚೊತ್ತಿದಂತೆಯಿಪ್ಪ ಹೊತ್ತಿನ ಗಡಿಯವನಲ್ಲ.
ಚಿತ್ತಜಹರ ಗುಡಿಯೊಡೆಯ ಗುಮ್ಮಟನ
ಅಗಮ್ಯೇಶ್ವರಲಿಂಗ ಕಟ್ಟುಗೊತ್ತಿನೊಳಗಲ್ಲ.