ಅರಿವು ಆತ್ಮ ಪರಿಪೂರ್ಣದಿರವನವರಿವರಲ್ಲಿ
ಆರೈಕೆಗೊಳಲಿಯೇಕೆ?
ಮತಕ್ಕೆ ಕರಣ, ಮಥನಕ್ಕೆ ಕರಣ,
ಮಥನಕ್ಕೆ ಅನುಭವ ಮಥನ,
ಅನುಭವ ಮಥನಕ್ಕೆ ಆತ್ಮ ಮಥನವುಂಟೆ?
ಇಂತೀ ತ್ರಿವಿಧದರಿವಂ ತಿರಿದುದಕ್ಕೆ ಹೇಳಿಹೆನೆಂಬ
ಹೆಚ್ಚಿಗೆ ಕೇಳಿಹೆನೆಂಬ ನಿಶ್ಚಯ.
ಈ ಉಭಯಭಾವದಲ್ಲಿ ನಿಂದ
ಪರಿಮವಿರಕ್ತರು ನೀವು ಕೇಳಿರಣ್ಣಾ.
ಆನು ಕೃತ್ಯವೆಂದನುಕರಿಸಿ ಪರತತ್ವವ ನುಡಿಯಲಿಲ್ಲ.
ಆನು ಭೃತ್ಯನೆಂದು ಅನುಸರಿಸಿ ಪರತತ್ವವ ಬೆಸಗೊಳಲಿಲ್ಲ.
ಈ ಉಭಯಸಂದೇಹ ಚಕ್ರದಂಡದಲ್ಲಿ
ಸಿಲುಕಿದ ಮರ್ಕಟನಂತಾಯಿತ್ತು.
ಮಹಾಘನ ಪ್ರಸಿದ್ಧ ಪ್ರಸನ್ನ ಸಂಗಮೇಶ್ವರಲಿಂಗದಲ್ಲಿ
ಚಕ್ರಪ್ರಸನ್ನ ಚೆನ್ನಬಸವಣ್ಣ.