Index   ವಚನ - 1276    Search  
 
ನಾನು ಗುರುಲಿಂಗಜಂಗಮದಲ್ಲಿ ನಿಷ್ಠೆವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪಾದೋದಕ ಪ್ರಸಾದದಲ್ಲಿ ನಿಷ್ಠೆವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಮೂರು ಪ್ರಣವಗಳಲ್ಲಿ ನಿಷ್ಠೆವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷ್ಠೆವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಶರಣರುಗಳಲ್ಲಿ ನಿಷ್ಟೆವಿಡಿದು, ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ ಬೇಡಿಕೊಂಡು ಬದುಕಿದೆನಯ್ಯಾ. ಗುಹೇಶ್ವರಾ, ನಿಮ್ಮ ಶರಣ ಬಸವಣ್ಣನ ಸನ್ನಿಧಿಯಿಂದ ನಾನು ಕೃತಾರ್ಥನಾದೆನಯ್ಯಾ.