ವಚನ - 1474     
 
ಲಿಂಗಗಂಭೀರ ಸುನಾದವೆ ತನುಗುಣ ಚರಿತ್ರ. ಜಂಗಮಗಂಭೀರ ಅನಾಹತವೆ ಮನಗುಣ ಸ್ವಭಾವ. ಈ ಎರಡರ ಸಂಬಂಧವೆ ಸಹಜ ಜ್ಞಾನ. ಆ ಮಹಾಜ್ಞಾನವೇ ಒಡಲು, ಆಚಾರವೇ ವಸ್ತ್ರ, ಪರಮಾನಂದ ಜಲದಲ್ಲಿ ಅಲುಬಿ, ಮಹಾಜ್ಞಾನಪ್ರಕಾಶದಲ್ಲಿ ಆರಿಸಿ ಅನಾಹತ ಮಥನದಲ್ಲಿ ಘಟ್ಟಿಸಿ, ಆ ವಸ್ತ್ರವ ಎನಗೆ ಕೊಟ್ಟಡೆ ಉಡದ ಮುನ್ನವೆ ಉರಿ ಹತ್ತಿತ್ತು ನೋಡಾ! ಆ ಉರಿಯು ಕಣ್ಣಿಗೆ ಕಾಣಬಾರದು, ಮನಕ್ಕೆ ನೆನೆಯಬಾರದು. ಉರಿ ಉಂಡು ಉಷ್ಣವಿಲ್ಲದ ಆ ಸ್ವಯಂಜ್ಯೋತಿಯ ನಿಜನಿವಾಸದಲ್ಲಿ ನಿಶ್ಚಿಂತನಾಗಿದ್ದು, ಮಡಿವಾಳ ಕೃಪೆಯಿಂದ ನಾನು ಬದುಕಿದೆನು ಕಾಣಾ ಗುಹೇಶ್ವರಾ.