ವಚನ - 1478     
 
ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಎಂದು ಅರಿದು ಮರೆದು ಬರುದೊರೆವೋದವರು, ಜಂಗಮವನಿನ್ನು ಬೇರೆ ಅರಸಲೇಕಯ್ಯಾ? ಆ ಲಿಂಗದೊಳಗೆ ಜಂಗಮವ ಅರಸಿಕೊಂಬುದು. ಲಿಂಗಾರ್ಚನೆಯ ಅವಸರಕ್ಕೆ ಜಂಗಮ ಮನೆಗೆ ಬಂದಡೆ ಲಿಂಗಾರ್ಚನೆಯ ಮಾದು, ಜಂಗಮಕ್ಕೆ ಇದಿರೆದ್ದು ವಂದಿಸಿ ಭಕ್ತಿಯ ಮಾಡಬಲ್ಲಾತನೆ ಭಕ್ತ. ಆ ಜಂಗಮ ಹೊರಗಿರಲು ಲಿಂಗಾರ್ಚನೆಯ ಮಾಡುತ್ತಿಪ್ಪಾತನೇತರ ಭಕ್ತ? ಜಂಗಮದ ಮುಂದೆ ಲಿಂಗವ ಕೈಯಲ್ಲಿ ಹಿಡಿದುಕೊಂಡು ಸಹಪಂಕ್ತಿಯಲ್ಲಿ ಕುಳ್ಳಿರ್ದು ಪೂಜಿಸುವಾತ ಭೃತ್ಯಾಚಾರದ್ರೋಹನು. ಆ ಭಕ್ತನ ಮನೆಯ ಹೋಗುವ ಜಂಗಮ ಅಜ್ಞಾನಿ. ನಮ್ಮ ಗುಹೇಶ್ವರನ ಶರಣರ ಕೂಡ ಅಹಂಕಾರವ ಹೊತ್ತಿಪ್ಪವರ ಕಂಡಡೆ ನಾನೊಲ್ಲೆ ಕಾಣಾ ಸಂಗನಬಸವಣ್ಣಾ.