Index   ವಚನ - 1552    Search  
 
ಸರ್ವಾತ್ಮ ಚೈತನ್ಯವಪ್ಪ ಜಂಗಮದ ಪರಿಯ ನೋಡಾ: ಅಖಂಡಬ್ರಹ್ಮದ ಬಯಲೆಲ್ಲಾ ತಾನಾಗಿ, ಸುಳಿವ ಮನ ಎಲ್ಲೆಡೆಯಿಲ್ಲದೆ ನಿರ್ಗಮನಿಯಾದಲ್ಲಿ ಒಂದಾಸೆಯೊಳಗಿಲ್ಲದವಿರಜ್ಞಾನಿ! ಕುರಿತೊಂದಕ್ಕೆ ಸುಳಿವವನಲ್ಲ, ಭಕ್ತಿಗಮ್ಯನು, ಉಳಿದ ಗಮನದ ತುರಿಯವಿಲ್ಲದೆ ತನ್ನ ನಿರ್ಗಮನದಿರವೆಂತೆಂದಡೆ: ಚತುರಾಕಾರದ ಭೂಮಿಯೆ ಸುಖತಲ್ಪ ಮಂಚ, ಆಕಾಶವೆ ಮೇಲುಕಟ್ಟು, ಚಂದ್ರಸೂರ್ಯರೆ ಉಭಯ ಭಾಗದಲ್ಲಿ ಬೆಳಗುವ ಜ್ಯೋತಿ, ಪರಿಣಾಮವೆ ತೃಪ್ತಿ, ದಿಕ್ಕುಗಳೆ ವಸನ, ಸದ್ಗುಣವಾಸನೆಯೇ ಪರಿಮಳ, ನಕ್ಷತ್ರಂಗಳೆ ಪುಷ್ಪ, ಶಿವತತ್ತ್ವಕಾಂತಿಯೆ ಆಭರಣ ತ್ರಿಗುಣಕೂಟವೆ ತಾಂಬೂಲ, ಜ್ಞಾನಶಕ್ತಿಯ ಸಂಗ, ಪ್ರಣವನಾದಗೀತ ಕೇಳಿಕೆ. ಇಂತೀ ಅಷ್ಟಭೋಗೈಶ್ವರ್ಯದಲ್ಲಿಪ್ಪ ರಾಜಯೋಗಿ ಚರಲಿಂಗ, ನಿಶ್ಚಿಂತ, ನಿರ್ವಾಣಿ, ನಿರಂಜನ, ನಿರ್ಮಾಯ, ನಿರ್ವ್ಯಸನಿ ಪರಮಜಂಗಮನಂತಲ್ಲದೆ, ಕಾಯದಿಚ್ಛೆಗೆ ಸುಳಿದು ಕಳವಳಿಸಿ ತ್ರಿವಿಧಕ್ಕೆ ಬದ್ಧಕರಪ್ಪವರೆಲ್ಲಾ ಜಗತ್ಪಾವನರಪ್ಪರೇ ಹೇಳಾ ಗುಹೇಶ್ವರಾ?