ವಚನ - 502     
 
ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು. ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು; ಸಾವನರಿಯಬಾರದು. ಶಿವ ಶಿವಾ ಮಹಾಪುರುಷರಿಗೆ ಸಾವುಂಟು. ಹರಿ ಬ್ರಹ್ಮ ರುದ್ರರಿಗೆಯೂ ಸಾವುಂಟು. ದಿಕ್ಪಾಲಕರು ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರಿಗೆಲ್ಲರಿಗೆಯೂ ಸಾವುಂಟು. ಮಹಾಪುರುಷರಿಗೆಯೂ ಸಾವುಂಟು. ಶಿವ ಶಿವಾ, ಈ ಸಾವನರಿಯದೀ ಲೋಕ! ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ ಆ ಮಹಾಮಹಿಮಂಗೆ ಸಾವಿಲ್ಲ. ಈ ಸಾವನರಿಯದ ಲೋಕ ಪ್ರಪಂಚ ಮರೆಯದೆ ಅರಿದೆವೆಂಬ ಅರೆಮರುಳಗಳ ಅರಿವು ಎಮ್ಮ ಗುಹೇಶ್ವರಲಿಂಗದಲ್ಲಿ ಮಾನಹಾನಿಕಾಣಾ ಸಂಗನಬಸವಣ್ಣಾ