ವಚನ - 770     
 
ಅಯ್ಯಾ! ಅಷ್ಟತನುವಿನ ಭ್ರಷ್ಟ ಮದಂಗಳ ತೂರಿ, ಅಷ್ಟ ಭೋಗವನಳಿದು, ಅಷ್ಟೈಶ್ವರ್ಯಗಳ ನೀಗಿ, ಅಷ್ಟಭಕ್ತಿಯನರಿದು, ಅಷ್ಟಾವರಣವ ತಿಳಿದು, ಅಷ್ಟವಿಧಸಕೀಲವ ಭೇದಿಸಿ ನೋಡಿ, ಅಷ್ಟಾಚಾರಗಳ ಕಂಡು, ನಿಷ್ಠೆ ನಿಜದಲ್ಲಿ ನಿಂದು, ಸಗುಣಾನಂದಲೀಲಾಮೂರ್ತಿಯಾಗಿ ಪ್ರಜ್ವಲಿಸುವ ಸದ್ಭಕ್ತ ಶರಣನಂತರಂಗದಲ್ಲಿ ಪರಿಪೂರ್ಣಲೀಲೆಯಿಂ ಮೂವತ್ತಾರು ತತ್ತ್ವಂಗಳನೊಳಕೊಂಡು, ಇಪ್ಪತ್ತು ನಾಲ್ಕು ಸ್ಥಲಂಗಳ ಗರ್ಭೀಕರಿಸಿಕೊಂಡು, ಸಾವಿರದೇಳುನೂರ ಇಪ್ಪತ್ತೆಂಟು ಮಂತ್ರ ಮಾಲೆಗಳ ಪಿಡಿದು, ಇಪ್ಪತ್ತುನಾಲ್ಕು ಸಕೀಲ ಗರ್ಭದಿಂ ``ಭಕ್ತ ದೇಹಿಕ ದೇವಾನಾಂ ದೇವ ದೇಹಿಕ ಭಕ್ತಯೋಃ'' ಎಂಬ ವಾಂಛೆಯಿಂ ಕ್ಷೀರದೊಳು ಘೃತವಡಗಿದಂತೆ ಪಂಚಾಚಾರಮೂರ್ತಿ ಆಚಾರ ಲಿಂಗವಾಗಿ ನೆಲಸಿರ್ಪುದು ನೋಡ! ಗುಹೇಶ್ವರಲಿಂಗವು ಚೆನ್ನಬಸವಣ್ಣ.