Index   ವಚನ - 8    Search  
 
ಅಯ್ಯಾ, ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ- ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು, ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸೆ ಪಂಚಾಶತ್‍ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ ಸುತ್ತಿ ಹರಿದವು ಸಪ್ತಸಾಗರಂಗಳು. ಎಂಬತ್ತಾರು ಕೋಟಿ ತೊಂಬತ್ತೇಳು ಲಕ್ಷ ಕಾಲ ಭುವನ ಮಂಡಲಕ್ಕೆ ಉದಯ ಬ್ರಹ್ಮಾಂಡ. ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ, ಬೆಳಗಿ ತೋರಿದ ಹನ್ನೆರಡು ಜ್ಯೋತಿಯ ನಿಲಿಸಿ ತೋರಿದ ಹದಿನಾಲ್ಕು ಭುವನವ. ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ, ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು. ಗುಹೇಶ್ವರಾ, ನಿಮ್ಮ ಶರಣ ಬಸವಣ್ಣನ ಶ್ರೀಪಾದಕೆ ನಮೋ ನಮೋ ಎನುತಿರ್ದೆನಯ್ಯಾ.