ವಚನ - 883     
 
ಆದಿ ಜಂಗಮ ಅನಾದಿ ಭಕ್ತನೆಂಬುದನಾರು ಬಲ್ಲರು ಹೇಳಾ ಬಸವಣ್ಣಾ ನೀನಲ್ಲದೆ? ನಿತ್ಯನಿರಾಕಾರ ಘನವು ಶಕ್ತಿಯಿಲ್ಲದೆ ಇದ್ದಡೆ, ಆಗಲೆ ಬಯಲಾದಹುದೆಂದು, ನೀನು ಘನಚೈತನ್ಯವೆಂಬ ಕಾಯವ ಧರಿಸಿದಡೆ, ಆ ಬಯಲು ಪರಬ್ರಹ್ಮವೆಂಬ ನಾಮವನೆಯ್ದಿತ್ತು. ನೋಡಾ ಬಸವಣ್ಣ ನಿನ್ನಂದ. ಆ ಮಹಾಘನವು ತನ್ನ ವಿನೋದದಿಂದ ಸಾಕಾರವನೆಯ್ದಿದಡೆ, [ನೀನು] ಧರ್ಮವೆಂಬ ಕಾಯವಧರಿಸಿ, ಆ ಮೂರ್ತಿಗೆ ಆಧಾರವಾದೆಯಾಗಿ ಜಗದ ಕರ್ತೃ ಶಿವನೆಂಬ ನಾಮವಾಯಿತ್ತಲ್ಲಾ ಬಸವಣ್ಣಾ. ಜಂಗಮವೆ ಲಿಂಗವೆಂದು ನೀನು ಭಾವಿಸಲಾಗಿ, ನಿನ್ನ ಸನ್ನಿಧಿಯಿಂದ ಪ್ರತಿನಿಧಿಯಾಯಿತ್ತು ನೋಡಾ ಬಸವಣ್ಣಾ. ಲಿಂಗವ ಹಿಡಿದು ನೀನು ಪೂಜಿಸಲಾಗಿ, ಲಿಂಗವು ಹೆಸರುವಡೆಯಿತ್ತು ನೋಡಾ ಬಸವಣ್ಣಾ ನಿನ್ನಿಂದ. ಪ್ರಸಾದವನು ನೀನು ಕೊಂಡು ಪಥವ ತೋರಿದೆಯಾಗಿ ಪ್ರಸಾದವು ಹೆಸರಾಯಿತ್ತು ನೋಡಾ ಬಸವಣ್ಣಾ ನಿನ್ನಿಂದ. ಇದು ಕಾರಣ ನೀನೆ ಅನಾದಿ ಭಕ್ತ, ನಾನೆ ಅನಾದಿಯಿಂದಿತ್ತತ್ತ! ನೀನು ಮಾಡಲಾಗಿ ಆನಾದೆನೆಂಬುದ ನಮ್ಮ ಗುಹೇಶ್ವರಲಿಂಗವು ಬಲ್ಲನು ಕಾಣಾ ಸಂಗನಬಸವಣ್ಣ.