Index   ವಚನ - 1    Search  
 
ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ: ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ: ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ: ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಭಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ: ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, ೠಕಾರವೆ ಉಗ್ರ, ಲೃಕಾರವೆ ಭೃಂಗಿರಿಟಿ, ಲೄಕಾರವೆ ಭೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ: ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ: ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀಧಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.