Index   ವಚನ - 15    Search  
 
ಪ್ರಜೆಗಳ ಅಲೆಯ ದೊರೆಯು ಒರ್ಚುವನಲ್ಲದೆ, ದೊರೆಯ ಅಲೆಯ ಪ್ರಜೆಗಳೊರ್ಚುವರೇನಯ್ಯಾ? ಮಕ್ಕಳಲೆಯ ತಾಯಿಯೊರ್ಚುವಳಲ್ಲದೆ, ತಾಯ ಅಲೆಯ ಮಕ್ಕಳೊರ್ಚುವರೇನಯ್ಯಾ? ನನ್ನಲೆಯ ನೀನೊರ್ಚಬೇಕಲ್ಲದೆ, ನಿನ್ನಲೆಯ ನಾನೊರ್ಚುವುದೇನಯ್ಯಾ? ತಮದೊಳಗಣ ಜಾಗ್ರವು ನೀನು, ಜಾಗ್ರದೊಳಗಣ ತಮವು ನಾನು. ನನಗೆ ನೀನು ಬಾಹ್ಯನೂ ನಿನಗೆ ನಾನು ಬಾಹ್ಯನೂ ಆಗಿರ್ದೊಡೆ, ನಾನೆಂತು ಸುಖಿಸುವೆ? ನೀನೆಂತು ಪರಿಗ್ರಹಿಸುವೆ? ನನ್ನೊಳಗೆ ನೀನೂ ನಿನ್ನೊಳಗೆ ನಾನೂ ಇರ್ದಲ್ಲದೆ, ನಿನ್ನ ನನ್ನ ಸಂಬಂಧಸಕೀಲವು ಸಂಘಟಿಸುವುದೇ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ?