Index   ವಚನ - 50    Search  
 
ಶಬ್ದಮಧ್ಯದಲ್ಲಿರ್ಪ ಅರ್ಥವೇ ಜೀವನು, ತಮೋರೂಪಮಾಗಿಹನು. ಜ್ಞಾನಮಧ್ಯದಲ್ಲಿರ್ಪ ಅರ್ಥವೇ ಪರಮನು, ಸತ್ವರೂಪಮಾಗಿಹನು. ಜ್ಞಾನಶರೀರದಲ್ಲಿರ್ಪ ಪರಮಾರ್ಥಭಾವವೆಂಬ ಹಸ್ತದಲ್ಲಿ ಬುದ್ಧಿಯೆಂಬ ತ್ರಿಗುಣಾತ್ಮಕಮಪ್ಪ ಮುನ್ಮೊನೆಯಲಗಂ ಪಿಡಿದು, ಆ ಶಬ್ದಶರೀರಂ ಭೇದಿಸಿ, ತನ್ಮಧ್ಯದಲ್ಲಿರ್ಪ ಅರ್ಥವನ್ನು ಆ ಜ್ಞಾನವು ಗ್ರಹಿಸಿದಲ್ಲಿ, ಜ್ಞಾನಾರ್ಥದೊಳಗೆ ಬೆರದು, ಎರಡೂ ಒಂದಾಗಿ, ಆ ಅರ್ಥವೇ ಸತ್ಯವಾಗಿ ಆನಂದಮಯಮಪ್ಪುದು. ಜ್ಞಾನವು ಗ್ರಹಿಸದೇ ಬಿಟ್ಟರೆ ಶಬ್ಧಾರ್ಥವೇ ದುರರ್ಥಮಾಗಿ, ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ಕೋಟಲೆಗೊಳ್ಳುತ್ತಿರ್ಪುದೇ ಜೀವನು, ಅದೇ ಪರಮನು. ತತ್ಪರಿಗ್ರಹವೇ ಐಕ್ಯಮಾದಲ್ಲಿ ಎರಡೂ ಒಂದೇ ಆಗಿರ್ಪುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.