Index   ವಚನ - 54    Search  
 
ಪೃಥ್ವಿಯೇ ಸ್ಥಾವರ, ಜಲವೇ ಜಂಗಮ, ಅಗ್ನಿಯೇ ಸ್ಥಾವರ, ವಾಯುವೇ ಜಂಗಮ. ಆಕಾಶವೇ ಸ್ಥಾವರ, ಜೀವನೇ ಜಂಗಮ. ಪೃಥ್ವಿಯೇ ಸ್ಥೂಲ, ಜಲವೇ ಸೂಕ್ಷ್ಮ. ಅಗ್ನಿಯೇ ಸ್ಥೂಲ, ವಾಯುವೇ ಸೂಕ್ಷ್ಮ ಆಕಾಶವೇ ಸ್ಥೂಲ, ಆತ್ಮನೇ ಸೂಕ್ಷ್ಮ. ಸ್ಥೂಲವಸ್ತುಗಳಿಂದ ಸೂಕ್ಷ್ಮ ವಸ್ತುಗಳೇ ಪ್ರಾಣಮಾಗಿಹವು. ತತ್ಸಂಗಂಗಳಿಂ ಬಿಂದುಕಳಾನಾದಗಳು ಸೃಷ್ಟಿಯಾಗುತ್ತಿಹವು. ಸ್ಥೂಲವಸ್ತುಗಳು ಆ ಸೂಕ್ಷ್ಮವಸ್ತುಗಳಲ್ಲೇ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿಹವು. ಪೃಥಿವ್ಯಾದಿ ಪಂಚಭೂತಂಗಳೇ ಘ್ರಾಣಾದಿ ಪಂಚೇಂದ್ರಿಯಂಗಳಾಗಿ, ಆಯಾ ಗುಣಂಗಳಂ ಗ್ರಹಿಸುವಂತೆ ಆತ್ಮನಿಗೆ ಮನಸ್ಸೇ ಇಂದ್ರಿಯಮಾಗಿ, ಆತ್ಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಪರಮಾತ್ಮನಿಗೆ ಭಾವೇಂದ್ರಿಯಮಾಗಿ, ಆ ಪರಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಮುಖಂಗಳಾವುವೆಂದೊಡೆ: ಘ್ರಾಣಕ್ಕೇ ವಾಯುವೇ ಮುಖ, ಜಿಹ್ವೆಗೆ ಅಗ್ನಿಯೇ ಮುಖ, ನೇತ್ರಕ್ಕೆ ಜಲವೇ ಮುಖ, ತ್ವಕ್ಕಿಗೆ ಪೃಥ್ವಿಯೇ ಮುಖ, ಶ್ರೋತ್ರಕ್ಕಾತ್ಮವೇ ಮುಖ, ಮನಸ್ಸಿಗೆ ಚಿದಾಕಾಶವೆ ಮುಖ, ಭಾವಕ್ಕೆ ನಿಜವೇ ಮುಖವಾದಲ್ಲಿ. ಪಂಚೇದ್ರಿಯಂಗಳು ಪಂಚಭೂತಗುಣಂಗಳಂ ಗ್ರಹಿಸುವಂತೆ, ಮನಸ್ಸು ಆತ್ಮಗುಣವನ್ನು ಜ್ಞಾನಮುಖದಿಂ ಗ್ರಹಿಸಿ, ಗುರುದತ್ತಲಿಂಗವೂ ಆತ್ಮನೂ ಏಕಮೆಂದು ತಿಳಿದು, ತೂರ್ಯಭಾವದಲ್ಲಿ ಸ್ವಭಾವಮಾಗಿ, ನಿಜಾನಂದ ತೂರ್ಯಾತೀತದಲ್ಲಿ ಎರಕವೆರದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.