Index   ವಚನ - 62    Search  
 
ಜಂಗಮಫಲವೆಲ್ಲವೂ ದೇವತೆಗಳಾಹಾರವು; ಸ್ಥಾವರಫಲವೆಲ್ಲವೂ ಮನುಷ್ಯರಾಹಾರವು. ಅದೆಂತೆಂದೊಡೆ: ದೇವತಾಬಿಂದುವಿನಲ್ಲಿ ಮನುಷ್ಯಕೃತ್ಯದಿಂದುದ್ಭವಿಸುವುದೆಲ್ಲ ಸ್ಥಾವರವು; ಮನುಷ್ಯ ಬಿಂದುವಿನಲ್ಲಿ ದೇವತಾಕೃತ್ಯದಿಂದುದ್ಭವಿಸುವುದೆಲ್ಲ ಜಂಗಮವು. ಮನುಷ್ಯರು ಶೂದ್ರಮುಖದಿಂ ಕೊಂಬುತಿರ್ಪರು. ದೇವತೆಗಳು ಬ್ರಾಹ್ಮಣಮುಖದಿಂ ಕೊಂಬುತಿರ್ಪರು. ಪೃಥ್ವಿಯಲ್ಲಿ ಎಂಬತ್ತುನಾಲ್ಕುಲಕ್ಷವಿಧ ಜಂಗಮಗಳು ಹೇಗೋ ದೇವತೆಗಳಲ್ಲಿಯೂ ಹಾಗೆ. ದೇವತೆಗಳು ತಮ್ಮ ಕರ್ಮಫಲವು ತೀರಿದೊಡೆ, ತದ್ಧೋಷ ಕರ್ಮಾನುಸಾರಮಾಗಿ ಪಂಚಾಶಲ್ಲಕ್ಷ ದೇಹಗಳೊಂದಂ ಹೊಂದಿ ಆಯಾ ಆಹಾರಂಗಳಂ ಭುಂಜಿಸುತ್ತಾ. ತದಾನುಗುಣ್ಯಮಾಗಿ ಕ್ರೀಡಿಸುತ್ತಿರ್ಪಂದದಿ, ಮನುಷ್ಯನು ಇಹಲೋಕಕರ್ಮವು ತೀರಿದಲ್ಲಿ ಆ ಕರ್ಮಫಲಕ್ಕೆ ತನ್ನ ಮರಣವಂ ಹೊಂದಿ, ದೇವತಾ ಪಿಶಾಚಾಂತಮಾದ ದೇಹಗಳೊಳೊಂದು ದೇಹವನ್ನೆತ್ತಿ, ಸುಖದುಃಖಗಳನನುಭವಿಸುತ್ತಾ ತನ್ನ ಅಧಿಕಾರಕ್ಕೆ ದೇವತೆಯನ್ನು ಗ್ರಹಿಸಿ, ಆ ದೇವತಾಮುಖದಿಂ ಆಹಾರಂಗಳಂ ಗ್ರಹಿಸುವಂತೆ, ಆ ದೇವತೆಗಳು ತಮ್ಮ ಅಧಿಕಾರಕ್ಕನುಗುಣವಾಗಿ ಮನುಷ್ಯರಂ ಗ್ರಹಿಸಿ, ಆ ಮನುಷ್ಯಮುಖದಿಂ ಆಹಾರಂಗಳಂ ಕೊಂಬುತಿರ್ಪರು. ದೇವತೆಗಳಿಗೆ ಮಂತ್ರದಿಂದಾವಾಹನೋಚ್ಚಾಟನೆಗಳು, ಮನುಷ್ಯರಿಗೆ ತಂತ್ರದಿಂದಾವಾಹನೋಚ್ಚಾಟನೆಗಳು. ಮನುಷ್ಯರಿಗೆ ತಂತ್ರದಿಂ ಕೂಡಿದ ಮಂತ್ರವು, ದೇವತೆಗಳಿಗೆ ಮಂತ್ರದಿಂ ಕೂಡಿದ ತಂತ್ರವು, ಇಂತು ಮನುಷ್ಯರೂಪದಿಂದ ಸತ್ತು. ದೇವತಾರೂಪದಿಂ ಹುಟ್ಟುತ್ತಿರ್ಪ ದಂದುಗವಂ ಬಿಡಿಸಿ, ನಿನ್ನಲ್ಲಿ ಸತ್ತು ಹುಟ್ಟುತ್ತಿರ್ಪ ನಿಜಸುಖವಂ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.