Index   ವಚನ - 63    Search  
 
ಘ್ರಾಣಜಿಹ್ವಾತ್ವಕ್ಫ್ರೋತ್ರಮಾನಸಾದಿ ವಿಷಯೇಂದ್ರಿಗಳಲ್ಲಿ ಪೃಥ್ವಿವ್ಯಪ್ತೇಜೋವಾಯ್ವಾಕಾಶಾತ್ಮಾದಿ ಷಡ್ಭೂತಂಗಳು ವಿಪರೀತಸಂಬಂಧಂಗಳಾಗಿ ತೋರುತ್ತಿರ್ಪವೆಂತೆಂದೊಡೆ: ಮನಸ್ಸಿನ ವಿಷಯದಲ್ಲಿ ಪೃಥ್ವಿಯು ಸೃಷ್ಟಿಕಾರಣಮಾಗಿಹುದು. ಶ್ರೋತ್ರವಿಷಯದಲ್ಲಿ ಜಲವು ಸಂರಕ್ಷಣಕಾರಣಮಾಗಿ ಶುಚಿಯಾಗಿಹುದು. ತ್ವಗ್ವಿಷಯದಲ್ಲಗ್ನಿಯು ಸಂಹಾರಕಾರಣಮಾಗಿಹುದು. ನೇತ್ರವಿಷಯದಲ್ಲಿ ವಾಯುವು ಚಂಚಲಕಾರಣಮಾಗಿಹುದು. ಜಿಹ್ವಾವಿಷಯದಲ್ಲಾಕಾಶವು ಶಬ್ದಕಾರಣಮಾಗಿಹುದು. ನಾಸಿಕ ವಿಷಯದಲ್ಲಾತ್ಮನು ಚೈತನ್ಯಕಾರಣಮಾಗಿಹನು. ವಾಯುವಿನೊಳಗೆ ಬೆರೆದ ಆತ್ಮನೇ ಜೀವನು; ಆತ್ಮನೊಳಗೆ ಬೆರೆದ ವಾಯುವೆ ಮನಸ್ಸು. ಪಂಚಭೂತರೂಪಮಾದ ಶರೀರಕ್ಕೆ ಜೀವನು ಕರ್ತನಾದಂದದಿ ಪಂಚಭೂತಗುಣಗ್ರಾಹಿಗಳಾದ ಇಂದ್ರಿಯಂಗಳಿಗೆ ಮನಸ್ಸೇ ಕರ್ತೃವಾಗಿ, ಆ ಇಂದ್ರಿಯಂಗಳು ಹೋದಲ್ಲಿಗೆ ಶರೀರವು ಹೋಗುವಂದದಿ, ಆ ಮನಸ್ಸೇ ಜೀವನಾಗಿ, ಆ ಮನಸ್ಸು ಹೋದಲ್ಲಿಗೆ ಜೀವನು ಹೋಗುತ್ತಿಹನು. ಅಂತಪ್ಪ ವಾಯುಸಂಗವಳಿದಲ್ಲಿ ಜೀವಮನಸ್ಸುಗಳೆಂಬ ಮಿಥ್ಯಾಕಲ್ಪನೆಯಳಿದು, ಆತ್ಮನೇ ನಿಜಸ್ವರೂಪಮಾದ ಪರಮಾತ್ಮನಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.