Index   ವಚನ - 64    Search  
 
ಸತ್ಯವೇ ಪರಮನು, ಜ್ಞಾನನವೇ ಜೀವನು, ಆನಂದವೇ ಶರೀರವು. ಅದೆಂತೆಂದೊಡೆ: ಶರೀರಾದಿ ಸಕಲಪ್ರಪಂಚಕ್ಕೂ ಜ್ಞಾನವೇ ಮೂಲವಾಗಿರ್ಪುದು. ಆನಂದಮುಖದೊಳ್ ಬಿಂದು ಜನಿಸಿ, ಆ ಬಿಂದುವೇ ಪೃಥ್ವೀರೂಪದಲ್ಲಿ ಘನೀಭವಿಸಿ, ಪಿಂಡಾಕಾರಮಾಗಿ ಶರೀರಮಪ್ಪಂತೆ, ಜ್ಞಾನಮುಖದಲ್ಲಿ ವಾಯುವು ಜನಿಸಿ, ತೇಜೋರೂಪದಲ್ಲಿ ಘನೀಭವಿಸಿ, ಜೀವನಾರ್ಪುದು. ನಿಜದಲ್ಲಾತ್ಮನು ಜನಿಸಿ, ಆಕಾಶರೂಪದಲ್ಲಿ ಘನೀಭವಿಸಿ ಪರಮನಾಗಿರ್ಪನು. ಆನಂದಬಿಂದುಮುಖದಿಂದ ಅಹಂಕಾರವು ಜನಿಸಿ, ಜ್ಞಾನವಾಯುಗಳ ಸಂಗದಿಂ ಮನವು ಪುಟ್ಟಿತ್ತು. ನಿಜಾತ್ಮಗಳ ಸಂಗದಿಂ ಭಾವವು ಹುಟ್ಟಿತ್ತು. ತತ್ಸಾಧ್ಯಕ್ಕವೇ ಸಾಧನಗಳಾಗಿರ್ಪುದರಿಂ ಇವೇ ಕರಣಂಗಳಾಗಿ, ಅವೇ ಕಾರಣಂಗಳಾಗಿರ್ಪವು. ಪೃಥ್ವವೀಬೀಜಗಳಸಂಗದಿಂದ ಬೀಜಮಧ್ಯದಲ್ಲಿ ವೃಕ್ಷವು ಜನಿಸಿತ್ತು. ವೃಕ್ಷವು ಬಲಿದಲ್ಲಿ ಬೀಜವು ನಷ್ಟಮಾಗಿ, ತದಗ್ರದಲ್ಲಿರ್ಪ ಫಲಮಧ್ಯದಲ್ಲಿ ಅನೇಕಮುಖಮಾಗಿ ತೋರುತ್ತಿರ್ಪಂತೆ, ಜ್ಞಾನವಾಯುಗಳಸಂಗದಿಂ ಜ್ಞಾನಮಧ್ಯದಲ್ಲಿ ಮನಸ್ಸು ಹುಟ್ಟಿ, ಅದು ಬಲಿದಲ್ಲಿ. ಆ ಮೂಲಜ್ಞಾನವಳಿದು, ತತ್ಫಲರೂಪಮಾದ ಇಂದ್ರಿಯಮಧ್ಯದಲ್ಲಿ ತೋರುತ್ತಿರ್ಪುದು. ಜಲವು ಆ ಬೀಜವಂ ಭೇದಿಸಿ, ತನ್ಮಧ್ಯದಲ್ಲಿ ವೃಕ್ಷವಂ ನಿರ್ಮಿಸುವಂತೆ, ಮನಸ್ಸೇ ಜಾಗ್ರತ್ಸ್ವರೂಪದಲ್ಲಿ ಜ್ಞಾನಭಿನ್ನವಂ ಮಾಡಿ, ತನ್ಮಧ್ಯದಲ್ಲಾನಂದವಂ ನಿರ್ಮಿಸುತ್ತಿರ್ಪುದು. ಆನಂದವೂ ನಿರಾಕಾರವೂ ಬಿಂದುವು ಸಾಕಾರವೂ ಆದುದರಿಂದ ಆನಂದವಂ ಬಿಂದುವು ಬಂಧಿಸಿರ್ಪಂತೆ, ವಾಯುವು ಜ್ಞಾನವಂ ಬಂಧಿಸಿರ್ಪುದು. ಆನಂದವು ಜ್ಞಾನದೊಳ್ಬೆರೆದಲ್ಲಿ ಶರೀರವು ಜೀವನಳೈಕ್ಯಮಾಯಿತ್ತು. ಆ ಜ್ಞಾನವು ನಿಜದೊಳ್ಬೆರೆದಲ್ಲಿಜೀವನು ಪರಮನೊಳೈಕ್ಯಮಾಯಿತ್ತು. ನಿಜಾನಂದ ಶಿವಶಕ್ತಿಗಳೇಕಮಾದಲ್ಲಿ ಜ್ಞಾನವದೊರಲಗೆ ಬೆರೆದು, ಭೇದವಡಗಿ ಅವರೆಡರ ಸಂಯೋಗ ವಿಯೋಗಕ್ಕೆ ತಾನೇ ಕಾರಣಮಾಗಿ, ನಿಜಾನಂದವೇ ತೋರುತ್ತಾ, ತಾನೊಪ್ಪುತ್ತಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.