Index   ವಚನ - 78    Search  
 
ಜೀವನಿಗೆ ಮನಸ್ಸೇ ಪ್ರಥಮವೇಷ. ಆ ಮನವಂ ಹಿಡಿದು ಸಕಲಗುಣಂಗಳೂ ಅಕ್ಷಯಗಳಾಗಿ ಒಂದಕೊಂದಾವರಿಸಿಕೊಂಡಿಹವು. ಅದೆಂತೆಂದೊಡೆ: ಜೀವನು ಶರೀರೋಪಾಧಿಯಿಂದ ಗಂಧವಸ್ತ್ರಾಭರಣ ಸಂಸಾರ ಗೃಹಕ್ಷೇತ್ರಾದ್ಯಾವರಣಂಗಳಿಂದಲೂ ನಾನಾವಿಧ ಭ್ರಾಮಕದಿಂದಲೂ ಬದ್ಧನಾಗಿ, ಆ ಶರೀರವಂ ಬಿಡಲಾರದೆ, ಆ ಶರೀರವೇ ತಾನಾಗಿ ವ್ಯವಹರಿಸುತ್ತಾ, ಹಲವು ಗುಣಗಳಿಂ ಬದ್ಧನಾಗಿ, ಆ ಸೂಕ್ಷ್ಮಶರೀರದಿಂ ಸ್ವರ್ಗಾದಿ ಭೋಗಂಗಳನ್ನೂ ನರಕಾದಿ ಯಾತನೆಗಳನ್ನೂ ಅನುಭವಿಸುತ್ತಿರ್ಪನು. ಮಾನಸಾದಿ ಕಾರಣಗಳಿಂ ಬದ್ಧನಾಗಿರ್ಪನೇ ಜೀವನು, ಅದಕ್ಕೆ ಹೊರಗಾಗಿರ್ಪನೇ ಪರಮನು. ಅದೆಂತೆಂದೊಡೆ: ದರ್ಪಣದಲ್ಲಿ ಬದ್ಧನಾಗಿರ್ಪ ನಿಜಛಾಯೆಯಂದದಿ ಆ ದರ್ಪಣವೇ ಮನಸ್ಸು, ಆ ಛಾಯೆಯೇ ಜೀವನು, ಆ ಛಾಯೆಯಿಂ ತನ್ನ ನಿಜಮಂ ವಿಚಾಸುತಿರ್ಪುದೇ ಭಾವವು. ಭಾವದಲ್ಲಿ ಬದ್ಧನಾಗಿರ್ಪನೇ ಪರಮನು, ಸಾಕಾರಮನದಲ್ಲಿ ನಿರಾಕಾರಮಾಗಿರ್ಪನೇ ಜೀವನು, ನಿರಾಕಾರಭಾವದಲ್ಲಿ ಸಾಕಾರಮಾಗಿರ್ಪನೇ ಪರಮನು. ಇಂತು ಅನಂತಗಳಾಗಿರ್ಪ ಮಾನಸಾದ್ಯುಪಾಧಿಗಳಲ್ಲಿ ಒಂದು ವಸ್ತುವೇ ನಾನಾಮುಖದಲ್ಲಿ ಅನಂತಗಳಾಗಿ ಉಪಾಧಿಯಂತಿರ್ದು, ಉಪಾಧಿಯುಪಾಧಿಯೊಳಗೆ ಕೂಡಿ ಪ್ರತಿಫಲಿಸಿ, ಛಾಯೆಯಿಂ ಛಾಯೆಯು ಪ್ರತಿಫಲಿಸಿ ಗಣನೆಗೆ ಸಾಧ್ಯಮಾಗದೆ ಕರತಲಾಮಲಕಮಾಗಿರ್ಪ ನಿನ್ನ ನಿಜಲೀಲಾ ನಟನೆಯಂ ನಾನೆಂತು ಬಣ್ಣಿಸುವೆನಯ್ಯಾ. ನಿನ್ನ ನಿಜಪ್ರಕಟನೆಯು ನನ್ನಿಂದಲ್ಲದೆ ಅನ್ಯರಿಂ ಸಾಧ್ಯಮಲ್ಲಮಾಗಿ, ನಿನಗಿಂತ ಶಿವಭಕ್ತರೇ ಅಧಿಕರಯ್ಯಾ. ನಿನ್ನಿಂದಲಾದುಪಾಧಿಯು ನಿನ್ನ ಕಾರಣದಿಂದಲೇ ಪರಿಹೃತಮಾದಲ್ಲಿ ನಾನೆಂಬಹಂಕಾರಮಳಿದು ನೀನು ನೀನಾದಲ್ಲಿ ನಿನ್ನೊಳಗಿಪ್ಪ ಮತ್ಸರವು ಮುನ್ನವೆ ಅಳಿದು, ಉನ್ನತಸುಖದೊಳೋಲಾಡುತ್ತಿರ್ಪೆನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.