Index   ವಚನ - 79    Search  
 
ಇಂದ್ರಿಯಂಗಳಲ್ಲಿ ಸುಷುಪ್ತಿಜ್ಞಾನವು, ಮನದಲ್ಲಿ ಸ್ವಪ್ನಜ್ಞಾನವು, ಭಾವದಲ್ಲಿ ಜಾಗ್ರಜ್ಞಾನವು. ಸುಷುಪ್ತಿಯಂ ಹೊಂದಿದಲ್ಲಿ ಜಾಗ್ರವು ಸ್ವಪ್ನವಾಗಿರ್ಪಂತೆ, ಜ್ಞಾನೇಂದ್ರಿಯಂಗಳಂ ಹೊಂದಿದಲ್ಲಿ ಭಾವವೇ ಮನಸ್ಸಾಗಿರ್ಪುದು. ಜಾಗ್ರವಂ ಹೊಂದಿದಲ್ಲಿ ಸ್ವಪ್ನಸುಷುಪ್ತಿಗಳಿಲ್ಲದಿರ್ಪಂತೆ, ಭಾವಜ್ಞಾನಮುದಯಮಾದಲ್ಲಿ ಮನಸ್ಸಿನಿಂದಿಂದ್ರಿಯಂಗಳಳಿದು, ನಿಶ್ಚಿಂತಮಾಗಿರ್ಪುದೇ ಕಾರಣವು. ಇಂತಪ್ಪ ಜಾಗ್ರತ್ಸ್ವಪ್ನ ಸುಷುಪ್ತಿಜ್ಞಾನಂಗಳನ್ನು ಹೊಂದಿ ಮಹಾಲಿಂಗವು ತಾಂ ತ್ರಿಮೂರ್ತಿಸ್ವರೂಪಮಂ ಧರಿಸಿ ಕ್ರೀಡಿಸುತ್ತಿರ್ಪುದು, ಜಾಗ್ರದಲ್ಲಿ ನಡೆಸುತ್ತಿರ್ಪುದೇ ರುದ್ರಮೂರ್ತಿಯು, ಸುಷುಪ್ತಿಯೋಗದಲ್ಲಿ ಆನಂದಿಸುತ್ತಿರ್ಪುದೇ ವಿಷ್ಣುಮೂರ್ತಿಯು, ಸ್ವಪ್ನದಲ್ಲಿ ಪ್ರಪಂಚಮಂ ಸೃಷ್ಟಿಸುತ್ತಿರ್ಪುದೇ ಬ್ರಹ್ಮಮೂರ್ತಿಯು. ಆ ಸ್ವಪ್ನವಂ ರಕ್ಷಿಸುತ್ತಿರ್ಪುದೇ ಸುಷುಪ್ತಿಯು, ಆ ಸ್ವಪ್ನವಂ ಸಂಹರಿಸುತ್ತಿರ್ಪುದೇ ಜಾಗ್ರವು, ಆ ಸ್ವಪ್ನವಂ ಸೃಷ್ಟಿಸುವುದೇ ಸ್ವಪ್ನವು. ಸ್ವಪ್ನದಲ್ಲಿರ್ಪವರಿಗೆ ಜಾಗ್ರವು ತಿಳಿಯದಿರ್ಪಂತೆ, ಪ್ರಪಂಚದಲ್ಲಿರ್ಪವರಿಗೆ ಪರಮನು ತಿಳಿಯದಿರ್ಪನು. ಸ್ವಪ್ನ ಸುಷುಪ್ತಿಗಳ್ತನ್ನಧೀನಮಾಗಿರ್ಪವು. ಜಾಗ್ರವು ತನ್ನಂ ಮೀರಿರುವುದರಿಂ ಮರಣದಲ್ಲಿ ಸ್ವಾತಂತ್ರ್ಯಮಿಲ್ಲಮಾಯಿತ್ತು. ಇಂತಪ್ಪ ಅವಸ್ಥಾತ್ರಯಂಗಳಲ್ಲಿ ಹೊಂದಿರ್ಪ ಜ್ಞಾನತ್ರಯಂಗಳಂ ಮೀರಿ, ಜ್ಞಾನ ತೂರ್ಯಾವಸ್ಥೆಯಂ ಹೊಂದಿದಲ್ಲಿ, ಮಹಾಲಿಂಗನಾದ ನೀನೊಬ್ಬನಲ್ಲದೆ ಮತ್ತಾರೂ ಇಲ್ಲದೆ, ನೀನೇ ನೀನಾಗಿರ್ಪ ನಿಜಸುಖವಮೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.