Index   ವಚನ - 94    Search  
 
ಹೃದಯದಲ್ಲಕ್ಷರಂಗಳಿರ್ಪಂತೆ ಆತ್ಮನಲ್ಲಿ ಪ್ರಪಂಚಮಿರ್ಪುದು, ಆತ್ಮನಲ್ಲಾಕಾಶವು ಪುಟ್ಟಿ ಆತ್ಮನಲ್ಲಿಯೇ ಅಡಗುವಂತೆ, ಹೃದಯದಲ್ಲಕ್ಷರಂಗಳು ಪುಟ್ಟಿ, ಹೃದಯದಲ್ಲಡಗುತ್ತಿರ್ಪವು. ಸ್ವಕೀಯರೂಪಂಗಳಾದ ಅಕ್ಷರಂಗಳಂ ಜಿಹ್ವಾಮುಖದಲ್ಲಿ ಸೃಷ್ಟಿಸಿ, ಶ್ರೋತ್ರಮುಖದಲ್ಲಿ ರಕ್ಷಿಸಿ, ತಾನೇ ಉಪಸಂಹಾರವಂ ಮಾಡಿ, ಎಲ್ಲಕ್ಕೂ ತಾನೇ ಕಾರಣಮಾಗಿರ್ಪಂತೆ. ಪ್ರಪಂಚಕ್ಕೆ ಪರಮನೇ ಕಾರಣಮಾಗಿರ್ಪನು. ಅಕ್ಷರಂಗಳನೊಡೆದು ಅದರಲ್ಲಿದ್ದರ್ಥವಂ ವಿಚಾರಿಸಿ, ನಿಸ್ಸಂದೇಹಪದಾರ್ಥವಂ ಗ್ರಹಿಸಿ, ಸಂಶಯಪದಾರ್ಥವಂ ಮಥಿಸಿ, ಶಬ್ದಮುಖಕ್ಕೆ ಹಾಕುವಂತೆ, ಶಿವನು ಮುಕ್ತರಂ ಗ್ರಹಿಸಿ ಪ್ರಕೃತಿಯುಕ್ತರಂ ಭವದಲ್ಲಿ ಬೀಳಿಸುತ್ತಿರ್ಪನು. ಹೃದಯವು ಶಬ್ದಮುಖದಲ್ಲಿ ಭಾವಜ್ಞರಿಗೆ ತೋರುತ್ತಿರ್ಪಂತೆ. ಪ್ರಪಂಚಮುಖದಲ್ಲಿ ಪರಮನು ದಿವ್ಯಜ್ಞಾನಿಗಳಿಗೆ ತೋರುತ್ತಿರ್ಪನು. ವಾಕ್ಯದಲ್ಲಿರ್ಪ ಜ್ಯೋತಿಯು ಹೃದಯದಲ್ಲಿರ್ಪ ತಮಸ್ಸಂ ಕೆಡಿಸಿದಲ್ಲಿ; ಆ ವಾಕ್ಯವೂ ಹೃದಯವೂ ಏಕಮಾಗಿ ಪ್ರಕಾಶಿಸುತ್ತಿರ್ಪಂತೆ, ಶಿವಜ್ಞಾನಿಗಳಲ್ಲಿರ್ಪ ಮನಸ್ಸು ಶಿವನಲ್ಲಿ ಲಯವಾದಲ್ಲಿ; ಸಕಲಪ್ರಪಂಚವೂ ಶಿವಸ್ವರೂಪಮಾಗಿ, ಎಲ್ಲವೂ ಒಂದೆಯಾಗಿರ್ಪುದು. ಆ ವಾಕ್ಯದಲ್ಲಿ ಪ್ರಪಂಚವು ಶಬ್ದವಾಗಿರ್ಪಂತೆ, ಹೃದಯದಲ್ಲಿ ಪರಮನು ಬದ್ಧನಾಗಿರ್ಪನು. ವಾಕ್ಯದಿಂದ ಕರ್ಮವು ಹುಟ್ಟುತ್ತಿಹುದು. ಆ ಕರ್ಮಕ್ಕೆ ಪ್ರಪಂಚವೇ ಕಾರಣವಾಗಿರ್ಪಂತೆ, ಹೃದಯದಲ್ಲಿ ಜ್ಞಾನವು ಪುಟ್ಟುತ್ತಿರ್ಪುದು. ಆ ಜ್ಞಾನಕ್ಕೆ ಶಿವನೇ ಕಾರಣಮಾಗಿರ್ಪನು. ದುಷ್ಕರ್ಮದಿಂ ಪ್ರಪಂಚಮುಖದಲ್ಲಿ ಯಾತನೆಬಡುತ್ತಿರ್ಪಂತೆ, ಅಜ್ಞಾನದಿಂದಾತ್ಮಮುಖದಲ್ಲಿ ಯಾತನೆಬಡುತ್ತಿರ್ಪನು. ಸತ್ಕರ್ಮದಿಂ ಬಾಹ್ಯಪ್ರಪಂಚದಲ್ಲಿ ಸಕಲೈಶ್ವರ್ಯಗಳನನುಭವಿಸುತ್ತಿರ್ಪಂತೆ, ಸುಜ್ಞಾನದಿಂ ಹೃದಯಂಗಮಮಾಗಿರ್ಪ ಶಿವಾನಂದಸುಖವನನುಭವಿಸುತ್ತಿರ್ಪನು. ತಮಸ್ಸನ್ನಳಿದ ಪ್ರಪಂಚವೂ ಪರಮನೂ ಏಕಮಾಗಿರ್ಪಂತೆ, ಸಂಶಯವಳಿದಲ್ಲಿ ಕರ್ಮಜ್ಞಾನಗಳೊಂದೇ ಆಗಿ ತೋರುತ್ತಿರ್ಪುದು. ಅಂತಪ್ಪ ಕರ್ಮಕರ್ತೃವಾಗಿ ಮಂತ್ರಚೈತನ್ಯವಾಗಿರ್ಪುದೇ ಇಷ್ಟಲಿಂಗವು, ಜ್ಞಾನಕರ್ತೃವಾಗಿ ಹೃದಯವೇ ಚೈತನ್ಯಮಾಗಿರ್ಪುದೇ ಪ್ರಾಣಲಿಂಗವು. ಇಂತಪ್ಪ ಇಷ್ಟ ಪ್ರಾಣ ಕರ್ಮ ಜ್ಞಾನ ಪ್ರಪಂಚಪರಮರೆಂಬ ಭೇದಬುದ್ದಿಯಳಿದು, ಭಾವದಲ್ಲೊಂದೇ ಅಖಂಡಜ್ಯೋತಿಯಾಗಿ ಪ್ರಕಾಶಿಸುತ್ತಿರ್ಪ ಅಭೇದಾನಂದ ನಿರ್ವಾಣಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.