ಹಕಾರವೇ ಶಿವನು, ಬಿಂದುವೇ ಪ್ರಕೃತಿಯು,
ಇವು ಮಿಥ್ಯಾಮಿಥ್ಯಗಳಾಗಿಹವು.
ಮಿಥ್ಯಾಪ್ರಕೃತಿಯೊಳಗೆ ಕೂಡಿದ ಶಿವನೇ ಹಮ್ಮಾಯಿತ್ತು.
ನಿಶ್ಚೇಷ್ಟಿತವಾದ ಬ್ರಹ್ಮದಲ್ಲಿ ಕಾಲವಶಾದ್ವಿಕಾಸಮುಕುಳನಗಳಾಗುತ್ತಿರ್ಪುದರಿಂ
ಬಿಂದುವಿನ ವಾಸನೆಯೇ ಆ ಪರಮಾತ್ಮಸಂಗದಿಂ
ಪ್ರಪಂಚಸೃಷ್ಟಿಕರ್ತೃವಾಗಿ,
ವಿಕಸನವೇ ಸ್ಥಿತಿಕರ್ತೃವಾಗಿ, ಮುಕುಳನವೇ ಸಂಹಾರಕರ್ತೃವಾಗಿ,
ಈ ಸೃಷ್ಟಿ ಸ್ಥಿತಿ ಸಂಹಾರಗಳಿಗಾ ಬಿಂದುವೇ ಕಾರಣಮಾಗಿ,
ಆ ಬ್ರಹ್ಮವೆ ಬಿಂದುರೂಪಮಾದ ಕಾರಣಕ್ಕೆ ತಾಂ ಕಾರಣಮಾಗಿ,
ಆ ಬಿಂದು ಕಾರಣಪ್ರಕೃತಿಯುಕ್ತಮಾಗಿ ಎಡೆಬಿಡದಿರ್ಪುದರಿಂ
ತಾನೇ ಹಂ ಆಯಿತ್ತು.
ಹಕಾರದಲ್ಲಿ ಕಕಾರವೂ, ಬಿಂದುವಿನಲ್ಲಿ ಸಕಾರವೂ
ಪ್ರಪಂಚ ಸೃಷ್ಟಿಸ್ಥಿತಿಸಂಹಾರನಿಮಿತ್ತಮಾಗುತ್ಪನ್ನಮಾಗುತ್ತಿರ್ಪುದರಿಂ
`ಕಸಯೋರ್ಯೋಗೇ ಕ್ಷ' ಎಂದಾಯಿತ್ತು.
ಹ ಎಂಬುದೇ ಲಿಂಗವು, ಅಕಾರ ಸಕಾರಯೋಗದಲ್ಲಿ
ಸಕಾರವೇ ಹಕಾರಮಾಯಿತ್ತು.
ಆ ಪ್ರಕೃತಿಯೊಳ್ಪುಟ್ಟಿದ ಸಕಾರವೇ
ಸ್ತ್ರೀಲಿಂಗಮಾದುದರಿಂ ಶಕ್ತಿಯಾಯಿತ್ತು.
ಹಕಾರದಲ್ಲಿ ಹುಟ್ಟಿದ ಸಕಾರವೇ ಪುಲ್ಲಿಂಗಮಾಯಿತ್ತು.
ಮಧ್ಯದಲ್ಲಿರ್ಪ ಹಂ ಎಂಬ ಪರಬ್ರಹ್ಮದಿಂ
ಭೂತಭವಿಷ್ಯಂಗಳಲ್ಲಿ ಪ್ರಕಾಶಮಾಯಿತ್ತು.
ಆ ಭೂತಗಳಲ್ಲಿರ್ಪ ಸಕಾರದೊಳಗೆ ಕೂಡಿ ಸೋಹಂ ಆಯಿತ್ತು,
ಆ ಭವಿಷ್ಯದೊಳಗಿರ್ಪ ಕಕಾರದೊಳಗೆ ಕೂಡಿ ಕೋಹಂ ಆಯಿತ್ತು,
ಅದೇ ಭಿನ್ನವು ಇದೇ ಅಭಿನ್ನವು.
ಭಿನ್ನವೇ ಇಷ್ಟಲಿಂಗವು, ಅಭಿನ್ನವೇ ಪ್ರಾಣಲಿಂಗವು.
ಭಿನ್ನಾಭಿನ್ನಗಳ ಮಧ್ಯದಲ್ಲಿ ಪ್ರಕಾಶಿಸಿ ಇಷ್ಟಪ್ರಾಣಂಗಳಿಗೆ
ಚೈತನ್ಯಮಾದ ಹಮ್ಮೇ ಭಾವಲಿಂಗವು.
ಮಹದಹಮ್ಮಿನಲ್ಲಿ ನನ್ನ ಹಮ್ಮುಡುಗಿ ಸುಮ್ಮನೆ
ಇರ್ಪಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.