Index   ವಚನ - 113    Search  
 
ವಾಕ್ಪಾಣಿಪಾದ ಗುದ ಗುಹ್ಯಗಳೈದು ಸ್ಥೂಲಜ್ಞಾನ ಪಂಚೇಂದ್ರಿಯ. ಘ್ರಾಣ ಜಿಹ್ವೆ ನೇತ್ರ ತ್ವಕ್ ಶ್ರೋತ್ರಂಗಳೈದು ಸೂಕ್ಷ್ಮ ಜ್ಞಾನ ಪಂಚೇಂದ್ರಿಯ. ಚಿತ್ತ ಬುದ್ಧಿ ಅಹಂಕಾರ ಮನೋಭಾವಂಗಳೈದು ಕಾರಣ [ಜ್ಞಾನ] ಪಂಚೇಂದ್ರಿಯ. ಕರ್ಮೇಂದ್ರಿಯ ಮಧ್ಯವಾದ ಹೃದಯದಲ್ಲಿರ್ದು ಕರ್ಮೋಪಭೋಗಿಯಾಗಿ ವಾಯುರೂಪದಲ್ಲಿ ಶರೀರಧಾರಿಯಾಗಿ, ಆಕಾಶ ಶರೀರಕ್ಕೆ ಸಕಲ ಪದಾರ್ಥಂಗಳನ್ನು ಹಂಚಿಕೊಡುತ್ತ, ಕರ್ಮೇಂದ್ರಿಯ ಮುಖದಲ್ಲಿ ಸೃಷ್ಟಿಕರ್ತುವಾಗಿ ಹೃತ್ಕಮಲದಳಂಗಳಲ್ಲಿ ಭ್ರಮಿಸುತ್ತ ತ್ವಙ್ನೌಷ್ಟಸ್ಪರಿಶನದಲ್ಲಿ ಶರೀರ ಕರ್ತುವಾಗಿರ್ಪನೆ ಜೀವಾತ್ಮನು. ಜ್ಙಾನೇಂದ್ರಿಯ ಮಧ್ಯಮಾಗಿರ್ಪ ಲಲಾಟದಲ್ಲಿರ್ದು ಸೂಕ್ಷ್ಮ ಶರೀರಕ್ಕೆ ಕರ್ತುವಾಗಿ ಜ್ಙಾನೋಪಭೋಗಿಯಾಗಿ ಜ್ಙಾನೇಂದ್ರಿಯ ಚೈತನ್ಯನಾಗಿ, ಗ್ರಹಣಮುಖದಿಂ ರಕ್ಷಣ್ಯಕರ್ತುವಾಗಿ ಮನೋನಿಷ್ಟ ಸಕಲ ವಿಷಯ ರೂಪನಾಗಿ, ಸೂಕ್ಷ್ಮ ಕರ್ತುವಾಗಿ,ಅದೃಷ್ಟಾನುಸಾರಿಯಾಗಿರ್ಪನೆ ಅಂತರಾತ್ಮನು. ಭಾವೇಂದ್ರಿಯ ಮಧ್ಯದಲ್ಲಿ ಭಾವನಿಷ್ಠನಾಗಿ, ಭಾವೇಂದ್ರಿಯ ಮಧ್ಯದಲ್ಲಿರ್ಪ ಬ್ರಹ್ಮಸ್ಥಾನ ನಿವಾಸಿಯಾಗಿ, ಕಾರಣ ಚೈತನ್ಯನಾಗಿ,ಕರ್ಮಮುಖದಲ್ಲಿ ಬಿಂದುಮೂಲವಾಗಿ, ಶರೀರವ ಸೃಷ್ಟಿಸಲು, ಜ್ಙಾನಮುಖದಲ್ಲಿ ಬಿಂದುಮಯ ಶರೀರವ ರಕ್ಷಿಸಲು, ಭಾವಮುಖದಲ್ಲಿ ಈ ಬಿಂದು ನಿಗ್ರಹದಿಂ ಶರೀರವ ಸಂಹರಿಸುತಿರ್ಪುದರಿಂ ಸಂಹಾರಕರ್ತುವಾಗಿ, ಭಾವವೊಂದರಲ್ಲಿರ್ಪಾತನೆ ಪರಮಾತ್ಮನು, ಉತ್ಕೃಷ್ಟಾತ್ಮನೆ ಪರಮಾತ್ಮನು. ಮಧ್ಯಮಾತ್ಮನೆ ಅಂತರಾತ್ಮನು, ಅಧಮಾತ್ಮನೆ ಜೀವಾತ್ಮನು. ಕರ್ಮ ಪಂಚೇಂದ್ರಿಯ- ಘ್ರಾಣ ಜಿಹ್ವೆ ನೇತ್ರ[ಕರ್ಣ]ತ್ವಗು. ಅಂತಪ್ಪ ತ್ವಗುವನನುಸರಿಸಿ ಕರ್ಮೇಂದ್ರಿಯಾದಿ ನವಮಸ್ಥಾನದಲ್ಲಿಪ್ಪಾತನೆ[ಜೀವಾತ್ಮನು] ಜ್ಞಾನಪಂಚೇಂದ್ರಿಯ- ಚಿತ್ತ[ಜ್ಞಾನ] ಬುದ್ದಿ ಅಹಂಕಾರ ಮನದಲ್ಲಿರ್ದು ಜ್ಞಾನೇಂದ್ರಿಯಾದಿ ನವಮಸ್ಥಾನದಲ್ಲಿರ್ಪಾತನೆ ಅಂತರಾತ್ಮನು. ಭಾವವೊಂದರಲ್ಲಿ ಏಕಮೇವಾದ್ವಿತ್ವೀಯನಾಗಿರ್ಪನೆ ಪರಮಾತ್ಮನು. ಏಕತ್ವವಾಗಿರ್ಪ ಪರಮನಲ್ಲಿ ನವಮತ್ವಂಗಳಾಗಿರ್ಪ ಜೀವಾತ್ಮಾಂತರಾತ್ಮಗಳೆರೆಡೂ ಶೂನ್ಯಗಳಾಗಿ,ಪರಮನಿಂ ಪ್ರಮಾಣಂಗಳಾಗಿ, ಶತರೂಪಮಾಗಿ, ಆ ನೂರು ಕೂಡಾ ಪರಮಾಯುಷ್ಯಮೆನಿಸಿರ್ಪುದು ಶರೀರದೊಳಗೆ ಕಾಪಾಡುತಿರ್ಪಾತನೆ ಜೀವಾತ್ಮನು. ಶರೀರದಹೊರಗೆ ಕಾಪಾಡುತಿರ್ಪಾತನೆ ಅಂತರರಾತ್ಮನು. ಒಳ ಹೊರಗೆರಡಕ್ಕೂ ಸಾಕ್ಷಿಕಾರಣನಾಗಿರ್ಪಾತನೆ ಪರಮಾತ್ಮನು. ಪ್ರಪಂಚವ ಜಾಗ್ರವ ರವಹೊಂದಿಸುತಿರ್ಪಾತನೆ ಜೀವಾತ್ಮನು. ಸ್ವಪ್ನವ ಹೊಂದಿಸುತಿರ್ಪಾತನೆ ಅಂತರಾತ್ಮನು. ಸುಷುಪ್ತಿಯ ಹೊಂದಿಸುತಿರ್ಪಾತನೆ ಪರಮಾತ್ಮನು. ಜೀವಾತ್ಮನನಾವರಿಸಿರ್ಪ ಬಿಂದು ಇಪ್ಪತ್ತೈದು ಭೇದಮಾಗಿರ್ಪುದು. ಅಂತರಾತ್ಮನನಾವರಿಸಿರ್ಪ ನಾದ ಐವತ್ತು ಭೇದಮಾಗಿರ್ಪದು. ಪರಮಾತ್ಮನುನಾವರಿಸಿರ್ಪ ಕಳೆ ನೂರು ಭೇದಮಾಗಿರ್ಪುದು. ಕಳೆಯೆಂದರೆ-ಕಾಲವೆಂಬುದರ್ಥ. ಜೀವಾತ್ಮನು ತ್ವಕ್ಕಿನಲ್ಲಿರ್ದು ನಾಸಿಕದಲ್ಲಿ ಸಂಚರಿಸುತಿರ್ಪನು. ಅಂತರಾತ್ಮನು ಮನಸ್ಸಿನಲ್ಲಿರ್ದು ಚಿತ್ತದಲ್ಲಿ ಸಂಚರಿಸುತಿರ್ಪನು. ಪರಮಾತ್ಮನು ಬ್ರಹ್ಮಸ್ಥಾನದಲ್ಲಿರ್ದು ಭಾವದಲ್ಲಿ ಸಂಚರಿಸುತಿರ್ಪನು ಇಂತು ಸ್ಪರ್ಶನದಲ್ಲಿರ್ಪ ಜೀವನಿಗೂ ಸ್ಪರ್ಶನದಲ್ಲಿಯಿರ್ಪ ಇಷ್ಟಲಿಂಗಕ್ಕೂ ಕರ್ಮವೆ ಸಂಬಂಧ ಕಾರಣ. ಮನದಲ್ಲಿರ್ಪ ಅಂತರಾತ್ಮನಿಗೂ,ಧ್ಯಾನದಲ್ಲಿಪ್ಪ ಆತ್ಮಲಿಂಗಕ್ಕೂ ಜ್ಞಾನವೆ ಸಂಬಂಧ ಕಾರಣ. ಭಾವದಲ್ಲಿಪ್ಪ ಪರಮಾತ್ಮನಿಗೂ ಆ ಭಾವದಲ್ಲಿರ್ಪ ಭಾವಲಿಂಗಕ್ಕೂ ಭಾವವೇ ಸಂಬಂಧ ಕಾರಣ. ಕರ್ಮ ಜ್ಞಾನ ಭಾವಂಗಳಿಂ ಇಷ್ಟ ಪ್ರಾಣ ಭಾವಲಿಂಗಂಗಳಲ್ಲಿ ಸ್ಥೂಲಸೂಕ್ಷ್ಮ ಕಾರಣಮಾದ ಜೀವಾತ್ಮ ಅಂತರಾತ್ಮ ಪರಮಾತ್ಮಂಗಳು ಬೆರದು ಭೇದದೋರದಿರ್ಪದೆ ಲಿಂಗೈಕ್ಯ. ಅಂತಪ್ಪ ಲಿಂಗೈಕ್ಯಾನಂದ ಸಕೀಲ ಸಾವಧಾನ ಸುಖ ಎನಗೆ ಸಾಧ್ಯಮಪ್ಪಂತೆ ಮಾಡಿ ಕೂಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.