Index   ವಚನ - 114    Search  
 
ಪೃಥ್ವಿಯನನುಸರಿಸಿರ್ಪ ಚಿತ್ತೇ ಪಶ್ಚಿಮ; ಜಲವನನುಸರಿಸಿರ್ಪ ಬುದ್ಧಿಯೇ ಉತ್ತರ; ವಾಯುವನನುಸರಿಸಿರ್ಪ ಮನವೇ ಪೂರ್ವ; ಅಗ್ನಿಯನನುಸರಿಸಿರ್ಪಹಂಕಾರವೇ ದಕ್ಷಿಣ. ಅಂತಪ್ಪ ಅಹಂಕಾರದಲ್ಲಿ ಧರ್ಮ ಪುಟ್ಟಿ, ವಾಯವ್ಯವ ಸೇರಿತು. ಬುದ್ಧಿಯಲ್ಲಿ ಅರ್ಥಪುಟ್ಟಿ, ಆಗ್ನೇಯವಸೇರಿತು. ಮನದಲ್ಲಿ ಕಾಮಪುಟ್ಟಿ ನೈರುತ್ಯವ ಸೇರಿತು. ಚಿತ್ತದಲ್ಲಿ ಮೋಕ್ಷಪುಟ್ಟಿ ಈಶಾನ್ಯವ ಸೇರಿತು. ಅಹಂಕಾರಜನ್ಯ ಧರ್ಮವೇ ವಾಯವ್ಯದಲ್ಲಿ ವಾಯುರೂಪವಾದ ಜೀವಮಾಯಿತ್ತು. ಬುದ್ಧಿಜನ್ಯಮಾದ ಆಗ್ನೇಯದಲ್ಲಿ ತೇಜೋರೂಪಮಾದ ಸತ್ವಗುಣವಾಯಿತ್ತು. ಚಿತ್ತ ಜನ್ಯವಾದ ಮೋಕ್ಷವೇ ಈಶಾನ್ಯದಲ್ಲಿ ಆತ್ಮರೂಪವಾದ ಶಿವನಾಯಿತ್ತು. ಮನೋಜನ್ಯಮಾದ ಕಾಮವೆ ನೈರುತ್ಯದಲ್ಲಿ ಘೋರರೂಪಮಾದ ತಮವಾಯಿತ್ತು. ವಾಯವ್ಯದಲ್ಲಿ ಇರ್ಪ ಜೀವನೇ ಜಂಗಮರೂಪು; ಈಶಾನ್ಯದಲ್ಲಿರ್ಪ ಶಿವನೆ ಸ್ಥಾವರರೂಪು. ಆ ಸ್ಥಾವರರೂಪಮಾದ ಶಿವನಿಗೆ ನೈರುತ್ಯದಲ್ಲಿರ್ಪ ತಮಸ್ಸೇ ಗುಣ. ವಾಯುರೂಪಮಾದ ಜೀವನಿಗೆ ಆಗ್ನೇಯದಲ್ಲಿರ್ಪ ತೇಜಸ್ಸೇ ಗುಣ. ತೇಜಸ್ತಿಮಿರಂಗಳೆ ಗುಣಂಗಳಾಗಿ ಜಂಗಮ ಸ್ಥಾವರಂಗಳೆ ಜೀವಪರಮರಾದರು. ಸ್ಥಾವರಕ್ಕೆ ಸತ್ವವೆ ಪವಿತ್ರ ರೂಪು; ಜಂಗಮಕ್ಕೆ ತಮಸ್ಸೇ ಅಪವಿತ್ರರೂಪು. ಆ ಪರಮನು ತಮಸ್ಸಿನಲ್ಲಿ ಕೂಡಿ ಜೀವನಾಗುತ್ತಿರ್ಪನು; ಆ ಜೀವನು ಸತ್ವದಲ್ಲಿ ಕೂಡಿ ಪರಮನಾಗುತ್ತಿರ್ಪನು. ಇಂತಪ್ಪ ಅಷ್ಟದಳ ಕರ್ಣಿಕೆಯಲ್ಲಿ ಪೂರ್ವದಳದಲ್ಲಿ ಮನೋಗತಮಾಗಿರ್ಪುದೆ `ಕಾ' ನೈರುತ್ಯದಲ್ಲಿ ತಮೋಗತಮಾಗಿರ್ಪುದೆ `ಮ' ದಕ್ಷಿಣದಲ್ಲಿ ಅಹಂಕಾರಗತಮಾಗಿರ್ಪುದೆ `ಧ' ವಾಯವ್ಯದಲ್ಲಿ ಜೀವಗತಮಾಗಿರ್ಪುದೆ `ರ್ಮ', ಉತ್ತರದಲ್ಲಿ ಬುದ್ಧಿಗತಮಾಗಿರ್ಪುದೆ `ಅ' ಆಗ್ನೇಯದಲ್ಲಿ ಸತ್ವಗತಮಾಗಿರ್ಪುದೆ `ರ್ಥ' ಪಶ್ಚಿಮದಲ್ಲಿ ಚಿತ್ತಗತಮಾಗಿರ್ಪುದೆ `ಮೋ' ಈಶಾನ್ಯದಲ್ಲಿ ಶಿವಗತಮಾಗಿರ್ಪುದೆ `ಕ್ಷ' ದಕ್ಷಿಣಾದಿಯಾಗಿ ನೈರುತ್ಯಾಂತಮಾಗಿರ್ಪುದೆ ಅಪ್ರದಕ್ಷಿಣ. ದಕ್ಷಿಣಾದ್ಯ ಪ್ರದಕ್ಷಿಣದಲ್ಲಿರ್ಪ ಧರ್ಥ ಕಾಕ್ಷ ಅಮ ಮೋರ್ಮ ಎಂಬ ಬೀಜಾಕ್ಷರಂಗಳಿಗೆ ಅರ್ಥವೆಂತೆಂದಡೆ: `ಧರ್ಥ' ಧರಿಸಲ್ಪಟ್ಟಂಥಾ, ವಾಂಛೆಯುಳ್ಳ `ಕಾಕ್ಷ' ಕುಚ್ಛಿತೇಂದ್ರಿಯಂಗಳ `ಅಮ' ತಮಸ್ಸಿನ, `ರಮಾ' ಕ್ರೀಡೆಯೆ, `ಉಮಾ' ಶಕ್ತಿ ಇದೆ ಅಪ್ರದಕ್ಷಿಣ ಶಕ್ತಿ. ಉತ್ತರಾದಿ ವಾಯುವ್ಯಾಂತವಾದ ಪ್ರದಕ್ಷಿಣದಲ್ಲಿರ್ಪ `ಅಕ್ಷ' `ಕಾರ್ಥ' `ಧಮ' `ಮೋರ್ಮ' ಎಂಬ ಬೀಜಾಕ್ಷರಂಗಳಿಗೆ ಅರ್ಥವೆಂದರೆ `ಅಕ್ಷ' ಜಪ್ಯಮಾದ `ಕಾರ್ಥ' ಬ್ರಹ್ಮಾರ್ಧವ `ಧಮ' ಘೋಷವೇ ಶಿವಮಂತ್ರ. ಅಂತಪ್ಪ ಶಿವಮಂತ್ರಮಯಮಾದ ಪ್ರದಕ್ಷಣ ಮಹಾಜಪವೇ `ಮೋರ್ಮ' ಮೋಕ್ಷಲಕ್ಷ್ಮಿ ಅದೇ ಶಕ್ತಿ. `ರ್ಮ' ಎಂಬ ಕಡೆಯಲ್ಲೂ, `ರ್ಥ' ಎಂಬ ಕಡೆಯಲ್ಲೂ `ಜಾ'ಣಾದಿ ಕಾಕಾರಾಗಮ ಪ್ರದಕ್ಷಿಣ ವಾಯವ್ಯದಲ್ಲಿರ್ಪ ಜೀವನಲ್ಲಿ ಮುಕ್ತಿ, ಅಪ್ರದಕ್ಷಿಣ ನೈರುತ್ಯದಲ್ಲಿರ್ಪ ನರಕರೂಪಮಾದ ಶರೀರದಲ್ಲಿ ಶಕ್ತಿ, ಭಿನ್ನ ಶರೀರ ಮೋಕ್ಷವೆ ಅಪವಿತ್ರ ದುಃಖರೂಪವಾದ ನರಕ, ಜೀವನ್ಮುಕ್ತಿಯೆ ಪವಿತ್ರ ಸುಖಮಯವಾದ ಅಭೇದ ಲಿಂಗೈಕ್ಯ. ಅಂತಪ್ಪ ಲಿಂಗೈಕ್ಯ ನಿರವಧಿಕ ನಿಜಾನಂದ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ.