ಮೊರನ ಹೊಲಿವ ಗವರ ನಾನೆತ್ತ ಬಲ್ಲೆನು?
ಕಟ್ಟಿಕೊಂಡಾತ ಭಕ್ತನಪ್ಪನೆ, ಕೆಡಹಿದಾತ ದ್ರೋಹಿಯಪ್ಪನೆ?
ಆ ಲಿಂಗವು ಕಟ್ಟಲಿಕೆ, ತನ್ನ ಕೈಯಲ್ಲಿಪ್ಪುದೆ?
ಕೆಡಹಲಿಕೆ, ಬೀಳಲು ಬಲ್ಲುದೆ?
ಆ ಲಿಂಗ ಬಿದ್ದ ಬಳಿಕ, ಜಗತ್ತು ಉಳಿಯಬಲ್ಲುದೆ.
ಆ ಪ್ರಾಣಲಿಂಗ ಬಿದ್ದಬಳಿಕ, ಆ ಪ್ರಾಣ ಉಳಿಯಬಲ್ಲುದೆ.
ಆ ಲಿಂಗ ಬಿದ್ದಿತ್ತೆಂಬ ಸೂತಕದ ಶಬ್ದ ಭ್ರಾಂತುವಿನ ಪುಂಜ
ಅಂತು ಅದ ಕೇಳಲಾಗದು.
ಯುಗಜುಗಂಗಳು ಗತವಹವಲ್ಲದೆ, ಲಿಂಗಕ್ಕೆ ಗತ ಉಂಟೆ?
ಲಿಂಗ ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಗಳ
ಮಾತ ಕೇಳಲಾಗದು, ಗವರೇಶ್ವರಾ.