Index   ವಚನ - 36    Search  
 
ತನುವಿನ ಮೇಲಿಪ್ಪುದು ಇಷ್ಟಲಿಂಗವೆಂದೆಂಬರು. ಆತ್ಮನ ನೆನಹಿನಲ್ಲಿಪ್ಪುದು ಪ್ರಾಣಲಿಂಗವೆಂದೆಂಬರು. ಇಂತೀ ಘಟಕ್ಕೂ ಆತ್ಮಕ್ಕೂ ಉಭಯ ಲಿಂಗವುಂಟೆ? ಹೊರಗಳ ಅಸ್ಥಿ ಚರ್ಮಕ್ಕೆ ಬೇರೊಂದು ಅಸುವ ಕಲ್ಪಿಸಬಹುದೆ? ಒಳಗಳ ಕರುಳು, ಮಜ್ಜೆ, ಮಾಂಸಕ್ಕೆ ಬೇರೊಂದು ಅಸುವಿನ ಕಲೆಯುಂಟೆ? ಇದಕ್ಕೆ ದೃಷ್ಟವ ಕಂಡಡೆ ಇಷ್ಟಲಿಂಗ ಪ್ರಾಣಲಿಂಗವೆಂಬುದಕ್ಕೆ ಕಟ್ಟುಂಟು. ಅದು ಅಚೇತನವಪ್ಪ ನಿರವಯಕ್ಕೆ ಅಚೇತನವಪ್ಪುದೊಂದು ದೃಷ್ಟ; ನಿರವಯ ಸಾವಯವದಲ್ಲಿ ಸಂಬಂಧಿಸಿ ಕುರುಹಾದ ಭೇದ. ಆ ಕಾಯದ ಒಳ ಹೊರಗಿನ ನೋವಿನ ಭೇದದಂತೆ, ಆ ಉಭಯವನರಿವ ಆತ್ಮ ಒಂದೆಯಾಗಿ, ಇಂತೀ ಕಾಯದ ಇಷ್ಟವೆಂದು, ಆತ್ಮನ ಅರಿವೆಂದು, ಎರಡೆನಿಸುವ ಲಿಂಗವೆಂಬುದೊಂದು ಕುರುಹಿಲ್ಲ. ಅದು ಏಕ ಏವ ಸ್ವರೂಪು; ಅದು ಚಿದ್ಘನ ಸ್ವರೂಪು; ಅದು ಘಟಮಠದ ಬಯಲಿನ ಗರ್ಭದಂತೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವು ಅತ್ಯತಿಷ್ಠದ್ದಶಾಂಗುಲನಾಗಿಪ್ಪನು.