Index   ವಚನ - 1    Search  
 
ಶರಣ ತನ್ನ ಪ್ರಾರಬ್ಧಕರ್ಮ ತೀರಿದ ವಿಸ್ತಾರವನರಿದು, ಪ್ರಕಾಶಿಸುತ್ತಿದ್ದ ಕಾರಣ, ಶ್ವಾನ ಜಂಗಮರೂಪನಾಗಬೇಕಾಯಿತ್ತು. ಗಜ ಮಲೆಯಿಂದ ಪುರದಲ್ಲಿಗೆ ಬಂದು, ಆ ಪುರದಲ್ಲಿ ಎಷ್ಟು ಸುಖವಾಗಿದ್ದರೂ ಮಿಗೆಮಿಗೆ ತನ್ನ ಮತಿಯನೆ ನೆನೆವುತಿಪ್ಪುದು. ಆ ಜಂಗಮ ಮೊದಲು ಪರಬ್ರಹ್ಮದಿಂದ ದೇಹವಿಡಿದನಾಗಿ, ಆ ದೇಹದಲ್ಲಿ ಎಷ್ಟು ಸುಖವಾಗಿದ್ದರೆಯೂ ಮಿಗೆಮಿಗೆ ಆ ಪರಬ್ರಹ್ಮವನೆ ನೆನೆವುತಿಹನು, ಇದು ಕಾರಣ, ಶ್ವಾನ ಗಜ ಇವೆರಡೂ ಶರಣಂಗೆ ಜಂಗಮಸ್ವರೂಪನಾಗಬೇಕಾಯಿತ್ತು. ಮನವೆ ಮರ್ಕಟ, ಅರಿವೆ ಪಿ[ಪೀ]ಲಿಕ, ಮಹಾಜ್ಞಾನವೆ ವಿಹಂಗ, ನಿತ್ಯ ಎಚ್ಚರವೆ ಕುಕ್ಕುಟ, ತನ್ನ ತಾನರಿವುದೆ ಶ್ವಾನ, ತನ್ನ ಬುದ್ಧಿಯೆ ಗಜ. ಇಂತೀ ಷಡ್ವಿಧವ ಬಲ್ಲಾತನೆ ಬ್ರಹ್ಮಜ್ಞಾನಿ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಗೊಹೇಶ್ವರಪ್ರಿಯ ಬಂಕಣ್ಣ ನಿಟ್ಟ ಮುಂಡಿಗೆಯನೆತ್ತುವರಿಲ್ಲ, ಬಸವಪ್ರಿಯ ಮಹಾಪ್ರಭುವೆ.