Index   ವಚನ - 1    Search  
 
ಓಡ ಹಿಡಿದವನ ಕೈ ಮಸಿಯೆಂಬುದ ನಾಡೆಲ್ಲ ಬಲ್ಲರು. ಅವನ ಕೂಡೆ ಆಡಲಾಗದು ಅಯ್ಯಾ, ತನಗಾ ಮಸಿ ಹತ್ತೂದಾಗಿ. ಲಿಂಗವಿರೋಧಿಯ ಕೈವಿಡಿದಾಡುವವ ಮುನ್ನವೆ ವ್ರತಗೇಡಿ. ಅಂಥವನ ಸಂಗ ಬೇಡಯ್ಯಾ, ತನಗಾ ಭಂಗ ಬಂದುದಾಗಿ. ಅದೆಂತೆಂದಡೆ: ಜಗದ ಕರ್ತ ಶಿವನ ವಿರೋಧವ ಮಾಡಿ ದಕ್ಷನೊಬ್ಬ ಯಾಗವನಿಕ್ಕಲು, ತೆತ್ತೀಸಕೋಟಿದೇವರ್ಕಳೆಲ್ಲಾ ತೊತ್ತಳದುಳಿಸಿಕೊಂಡು, ನುಚ್ಚುನುರಿಯಾಗಿ ಹೋದರು ನೋಡಾ, ಅವನಂಗ ಸಂಗದಲ್ಲಿದ ಕಾರಣ. ಗೆಲ್ಲ ಸೋಲಕೆ ಇಕ್ಕು ಮುಂಡಿಗೆ, ಏರು ಮುಂಡಿಗೆಯೆಂಬ ಮಚ್ಚರಕ್ಕೆ ಮುಂದುವಿಡಿದು ಮುಡುಹಿಕ್ಕಿ ಕೆಲದಾಡುವರೆಲ್ಲಾ. ತಮ್ಮ ಮನದಲ್ಲಿ ತಾವರಿದು ಒಯ್ಯನೆ ತೊಲಗುವರು. ಮೇಲೆ ಲಿಂಗ ನಿರೂಪದಿಂದ ಬಂದ ಕಾರ್ಯಕ್ಕೆ ಅಂಜರು, ಏಕಾಂಗವೀರರು. ವಾಯದ ಹರೆಮಾತಿನ ಮಾಲೆಗೆ ಬೆದರಿ ಬೆಚ್ಚಿ ಓಡುವನಲ್ಲ, ಏಕೋಭಾವ ನಿಷ್ಠೆ ನಿಬ್ಬೆರಗು ಗಟ್ಟಿಗೊಂಡ ದೃಢಚಿತ್ತವುಳ್ಳ ಸದ್ಭಕ್ತ. ಇಂತಪ್ಪ ಉಲುಹಡಗಿದ ಶರಣರ ಸಂಗದಲ್ಲಿರಿಸಿ ಬದುಕುವಂತಿರಿಸಯ್ಯಾ, ವರದ ಶಂಕರೇಶ್ವರಾ.