Index   ವಚನ - 52    Search  
 
ಜಗಮೆಚ್ಚಬೇಕೆಂಬ ಶೀಲವ ನಾನರಿಯೆ, ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ, ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ. ಹೊರಗಣ ಬಾವಿ, ಮನೆಯ ಮಡಕೆ - ತನುಘಾತಕಕ್ಕಾದ ಶೀಲವೆಂದು ನಾನರಿಯೆ. ತಾ ಹೋದಲ್ಲಿ ಇದಿರ ಕೇಳುವಲ್ಲಿ ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ, ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು, ನೇಮಕ್ಕೆ ಬಂದುದ ವ್ರತಕ್ಕೆ ಸಂದುದ ಸಂದೇಹವುಳ್ಳನ್ನಕ್ಕ ವಿಚಾರಿಸಿ, ಸಂದೇಹ ನಿಂದಲ್ಲಿ ತನ್ನ ಆಯತದ ಅನುವನರಿತು ಕೊಂಬುದು ಪ್ರಸಾದವು. ಇಂತೀ ತನುವಿಚಾರ ಕ್ರೀವಿಚಾರ; ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ.