Index   ವಚನ - 61    Search  
 
ತನುಶೀಲವಂತರುಂಟು, ಧನಶೀಲವಂತರುಂಟು, ಧರೆಶೀಲವಂತರುಂಟು, ಕನಕ ವನಿತೆಶೀಲವಂತರುಂಟು. ಕೆಯಿ ತೋಟ ಹಿಂದೆಸೆ ಮುಂದೆಸೆ ನಿಳಯಶೀಲವಂತರುಂಟು. ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ ಛತ್ರ ಚಾಮರ ಅಂದಳ ಕರಿ ತುರಗಂಗಳು ಮುಂತಾದವೆಲ್ಲಕ್ಕೂ ಶೀಲವಂತರುಂಟು. ಅನುಸರಣೆಯ ಕಂಡಲ್ಲಿ, ಆಚಾರ ತಪ್ಪಿದಲ್ಲಿ, ಲಿಂಗ ಬಾಹ್ಯವಾದಲ್ಲಿ, ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ ಶೀಲವಂತರಂಗವ ಕಾಣೆ. ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.