Index   ವಚನ - 82    Search  
 
ನಿತ್ಯ ಚಿಲುಮೆಯ ನೇಮಕ್ಕೆ ಶಿವಭಕ್ತರ ಸೀಮೆಯಲ್ಲಿಯಲ್ಲದೆ ಇರಲಿಲ್ಲ. ಶಿವಭಕ್ತರು ಮುಟ್ಟಿ ತಂದ ದ್ರವ್ಯವನಲ್ಲದೆ ಒಪ್ಪಲಿಲ್ಲ. ಭೋಜನಕ್ಕೆ ತಮ್ಮಾಯತದ ಜಲ ಲಿಂಗಮುದ್ರೆಯ ಸೀಮೆಯ ಮೃತ್ತಿಕೆ ಮರ ಕಲ್ಲು ಮುಂತಾದ ಮತ್ತಾವಾವ ಗುಣಂಗಳೆಲ್ಲವು ಲಿಂಗಧಾರಣ ಸೀಮೆಯಾಗಿ, ಮತ್ತೆ ಆವಾವ ಗುಣಂಗಳಿಂದ ಮನವೆಟ್ಟುವನ್ನಬರ ಚಿತ್ತಸುಯಿಧಾನಿಯಾಗಿ, ತನ್ನಾಯತದ ಕೈಯ ಧಾನ್ಯವ ಕುಟ್ಟುವಲ್ಲಿ, ಒರಳು ಒನಕೆಯ ಶಬ್ದವಂ ಭವಿಗಳು ಕೇಳದಂತೆ ಸ್ವಯಂ ಪಾಕವ ಮಾಡುವಲ್ಲಿ, ಅಗ್ನಿಯಲ್ಲಿ ಕಾಷ್ಠದಲ್ಲಿ ಭೂಮಿಯಲ್ಲಿ ಸುಜಲದಲ್ಲಿ ಇಂಬಿಡುವಲ್ಲಿ ತೆಗೆವಲ್ಲಿ ಲಿಂಗಸುಯಿಧಾನಿಯಾಗಿ, ಮಜ್ಜನ ದಂತಾವಳಿಗಳಲ್ಲಿ ಶುಚಿರ್ಭೂತನಾಗಿ, ಜಂಗಮಲಿಂಗದ ಮುಂದಿಟ್ಟು ಅವರು ಸ್ವೀಕರಿಸುವನ್ನಕ್ಕ ನೇತ್ರತುಂಬಿ ನೋಡಿ ಅವರ ಕಾರುಣ್ಯವ ಪಡೆದು ಇಪ್ಪುದು ಸದ್ಭಕ್ತನ ವ್ರತ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.