Index   ವಚನ - 121    Search  
 
ವಿಪ್ರಂಗೆ ವೇದಮಂತ್ರವ ಬಿಟ್ಟು ವಿಜಾತಿಯಲ್ಲಿ ಬೆರಸಲಿಕ್ಕೆ ಸ್ವಜಾತಿಗೆ ಹೊರಗಪ್ಪರು ನೋಡಾ. ಶ್ರೀ ವಿಭೂತಿ ಶ್ರೀ ರುದ್ರಾಕ್ಷಿ ಶಿವಲಿಂಗ ಮುಂತಾದ ನಾನಾ ವ್ರತ ನೇಮ ನಿತ್ಯದ ಭಾವವ ಬಿಟ್ಟು ಬಂದವನ ಗುರುವಾದಡು ಲಿಂಗವಾದಡು ಜಂಗಮವಾದಡು ನೋಡಿದಡೆ ನುಡಿಸಿದಡೆ ಆ ಘಟವಿದ್ದೆಡೆಯಲ್ಲಿ ನಾನಿದ್ದೆನಾದಡೆ ಎನ್ನ ವ್ರತಕ್ಕದೆ ಭಂಗ. ಅನುಸರಣೆಯಲ್ಲಿ ಬಂದವರ ಕಂಡು ಕೇಳಿ ಅವರ ಅಂಗಳವ ಕೂಡಿಕೊಂಡವರ ಇದ ನಾನರಿತು ಅಂಗೀಕರಿಸಿದೆನಾದಡೆ ಇಹಪರಕ್ಕೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ವ್ರತಬಾಹ್ಯವಾದಡೆ ಎತ್ತಿಹಾಕುವೆನು.