ವ್ರತಾಚಾರವೆಂಬುದು ತನಗೊ,
ತನ್ನ ಸತಿಗೊ, ಇದಿರ ಭೂತಹಿತಕೊ?
ತಾನರಿಯದೆ ತನಗೆ ವ್ರತ ಉಂಟೆ?
ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ
ಅನ್ಯರಿಗೆ ಕೊಡಬಹುದೆ?
ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ?
ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು
ಕ್ರೀವಂತರಲ್ಲಿಯೆ ಕೊಟ್ಟು
ಉಭಯ ಭಿನ್ನವಿಲ್ಲದೆ ಇಪ್ಪುದೆ ಸಜ್ಜನ ವ್ರತ,
ಸದಾತ್ಮ ಯುಕ್ತಿ; ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದಲ್ಲಿ ಮುಕ್ತಿ.