Index   ವಚನ - 1    Search  
 
ಎಲೆ ದೇವಾ ಏತಕ್ಕೆ ನುಡಿಯೇ? ಎನ್ನೊಳು ಮುನಿಸೆ? ಎನ್ನೊಳು ನಿನ್ನಯ ಚಿತ್ತವನಿರಿಸಿ ನೀಕರಿಸಿ ನುಡಿಯದಿರ್ದಡೆ ಎನ್ನಯ ನೋವನಿನ್ನಾರಿಗೆ ಹೇಳುವೆ, ನಿನಗಲ್ಲುದೆ? ನೀ ಮಾಡುವ ಮಾಟ ಅನೇಕ ಕುಟಿಲ. ಯೋಗಿಗಳ ಸುತ್ತಿ ಮುತ್ತಿದ ಹರಿತದ ಪಾಶ ನಿಮ್ಮಲ್ಲಿ. ಅನೇಕರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ. ಭಕ್ತರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾಗಿ, ನಿನಗದು ನೀತಿಯೇ? ರುದ್ರನ ವೇಷಕ್ಕದು ಸಹಜ, ಅವ ಬಿಡು ಬಿಡು ನೀಕರಿಸು. ಉಮಾಪತಿ ವೇಷವ ಬಿಟ್ಟು ಸ್ವಯಂಭುವಾಗು. ಎಲೆ ಅಯ್ಯಾ, ಎನ್ನಲ್ಲಿ ಸದ್ಭಕ್ತಿಯ ನೆಲೆಗೊಳಿಸಿ, ಎನ್ನ ಪ್ರಕೃತಿಯ ಪರಿಹರಿಸಯ್ಯಾ. ಎನ್ನ ತಂದೆ, ಮುಕುರ ಪ್ರತಿಬಿಂಬದಂತೆ ಎನಗೆ ನಿನಗೆಂಬುದ ನೀನರಿಯಾ? ಎಲೆ ದೇವಾ, ಅರಿದರಿದೇಕೆನಗೆ ಕೃಪೆಯಾಗಲೊಲ್ಲೆ. ಎಲೆ ಸ್ವಾಮಿ, ಅನು ಮಾಡಿದುದೇನು ನಿನಗೆ? ಮಾರನ ಕೊಂದ ಮಲತ್ರಯದೊರನೆ, ಅನಾಗತಸಂಸಿದ್ಧ ಭೋಗಮಯನೆ. ನಯನ ಚರಣಾರವಿಂದ ವಿರಾಜಿತನೆ, ಸರ್ವವ್ಯಾಪಕ ನಾಶನೆ. ಸರ್ವಾಂತರ್ಗತ ವಿಮಲಾಂತರರಂಗನೆ, ಕರುಣಾಬ್ಧಿಚಂದ್ರ ವಿಲಾಸಿತನೆ ಭಕ್ತ ಚಿತ್ತದ ಸಾಕಾರದ ಪುಂಜನೆ, ಭಕ್ತವತ್ಸಲನೆ, ಭಕ್ತದೇಹಿಕದೇವನೆ, ಎನಗೆ ನಿಮ್ಮ ಭಕ್ತಿವಿಲಾಸವ ಕರುಣಿಸಯ್ಯಾ. ಶಂಭು ಮಾರೇಶ್ವರಾ.