Index   ವಚನ - 1    Search  
 
ಅಯ್ಯಾ, ಇಂತು ವಿರಾಜಿಸುವ ಗುರುಸಿದ್ಧೇಶ್ವರಸ್ವಾಮಿಗಳು. ಮುಂದೆ, ಗುರುಪುರದ ಮೇಲುಮಠದ ಮಹಾಮಂದಿರದ ರಂಗಮಂಟಪ ಸಿಂಹಾಸನಕ್ಕೆ ಮೂಲಮೂರ್ತಿಯಾದ ಮರಿಮಹಾಂತೇಶ್ವರಸ್ವಾಮಿಗಳು. ಆ ಮರಿಮಹಾಂತೇಶ್ವರನ ಕರಕಮಲೋದ್ಭವನಾದ ಶಿವಪುರದ ಬಸವಪ್ರಭುಶೆಟ್ಟಿ. ಆ ಬಸವಪ್ರಭುಶೆಟ್ಟಿಯ ಕರ ಮನ ಸುಭಾವದಲ್ಲಿ ಪೂಜೆಗೊಂಡು ಆ ಬಸವಪ್ರಭುಶೆಟ್ಟಿಯ ತಮ್ಮ ಚರಣಕಮಲದಲ್ಲಿ ಅಮಳೈಕ್ಯವ ಮಾಡಿಕೊಂಡ ಮೇಲೆ ಮಹಾಜ್ಞಾನ ತಲೆದೋರಿ ಸಮಸ್ತ ಭೋಗಂಗಳ ತ್ಯಜಿಸಿ ವೈರಾಗ್ಯದಿಂದ ಗುರೂಪಾವಸ್ತೆಯ ಮಾಡುತ್ತಿರಲು, ಆ ಸಮಯದಲ್ಲಿ ಹರದನಹಳ್ಳಿ ಸ್ಥಾಪನಾಚಾರ್ಯ ಶಿವಲಿಂಗಶಕ್ತಿವಲ್ಲಭನಾದ ಬಸವಲಿಂಗದೇಶಿಕೋತ್ತಮನು ಪ್ರತ್ಯಕ್ಷವಾಗಿ ಆ ಸಂಗನಬಸವೇಶ್ವರಸ್ವಾಮಿಗಳ ಒಡಗೂಡಿಕೊಂಡು ಶ್ರೀಶೈಲ ಪರ್ವತಕ್ಕೆ ನೈಋತ್ಯಭಾಗದಲ್ಲೊಪ್ಪುವ ಕುಮಾರಪರ್ವತದ ಉತ್ತರದಿಕ್ಕಿನಲ್ಲೊಪ್ಪುವ ನಾಗರಗವಿಯೆಂಬ ಸಿಂಹಾಸನದಲ್ಲಿ ಜಂಗಮಮೂರ್ತಿಗಳೊಡಗೂಡಿ ಶಿವಾನುಭಾವಸೂತ್ರದಲ್ಲೊಪ್ಪುವ ಗುರುಸಿದ್ಧಸ್ವಾಮಿಗಳಿಗೆ ಉಭಯಮೂರ್ತಿಗಳು ಅಷ್ಟಾಂಗಪ್ರಣಿತರಾಗಿ ಅಭಿವಂದಿಸಲು, ಆಗ ಮಹಾಸ್ವಾಮಿಗಳು ದಯಾಂತಃಕರುಣ ಹುಟ್ಟಿ ಬಸವಲಿಂಗದೇಶಿಕೇಂದ್ರನ ಆಪ್ತತ್ವದಿಂದ ಹರಗುರುವಾಕ್ಯಪ್ರಮಾಣವಾಗಿ ಸ್ಥಲಮೆಟ್ಟಿಗೆಯಿಂದ ಮಣಿಗಣಸೂತ್ರದಂತೆ ಸೇರಿಸಿ ಬೋಧಿಸುವ ಸಮಯದಲ್ಲಿ ಬಸವಲಿಂಗೇಶ್ವರನು ಲಿಖಿತವ ಮಾಡಿ, ಆ ಗುರುವರನ ಹಸ್ತಕಮಲಕ್ಕೆ ಕೊಡಲು, ಆಗ ಗುರುವರನು ಈ ಉಭಯಮೂರ್ತಿಗಳ ಒಡಗೂಡಿ ಆಸನವ ಬಿಟ್ಟೆದ್ದು ಕರ್ತುಸ್ವರೂಪವಾದ ಶಾಂತಮಲ್ಲಸ್ವಾಮಿಗಳ ಮುಂದೆ ಆ ಪುಸ್ತಕವನಿಟ್ಟು ತ್ರಿವಿಧಮೂರ್ತಿಗಳು ಶರಣುಹೊಗಲು, ಆಗ ಶಾಂತಮಲ್ಲಸ್ವಾಮಿಗಳು ಆ ಪುಸ್ತಕವ ಬಿಚ್ಚಿ ಈ ತ್ರಿವಿಧಮೂರ್ತಿಗಳು ಸಹವಾಗಿ ಸಮಸ್ತ ಜಂಗಮಮೂರ್ತಿಗಳೊಡಗೂಡಿ ಸ್ವರೂಪಾರ್ಥ-ಸಂಬಂಧಾರ್ಥ-ನಿಶ್ಚಯಾರ್ಥಂಗಳಿಂದ ಅನುಭಾವವ ಮಾಡಿ ಆ ಪುಸ್ತಕಕ್ಕೆ ಅನಾದಿಷಟ್ಸ್ಥಲ ನಿರಾಭಾರಿ ವೀರಶೈವ ಶರಣನ ನಿಜಾಚರಣೆಸಂಬಂಧ ಬೋಧಾಮೃತ ನಿಲುಕಡೆ ಚಿದೈಶ್ವರ್ಯ ಚಿದಾಭರಣವೆಂದು ನಾಮಾಂಕಿತವಿಟ್ಟು, ಬಸವಲಿಂಗ ಸಾಕ್ಷಿಯಾಗಿ ಆ ಸಂಗನನಬಸವೇಶ್ವರನೆಂಬ ಗಣೇಶ್ವರನ ಸಿಂಹಾಸನದ ಮೇಲೆ ಮೂರ್ತಮಾಡಿಸಿ, ಆ ಪುಸ್ತಕವ ತೊಡೆಯಮೇಲಿಟ್ಟು ಸ್ತೋತ್ರವ ಮಾಡಿ ಮಂಗಳಾರತಿಯನೆತ್ತಿ , ಪುಷ್ಪಾಂಜಲಿಯ ಮಾಡಿ, ವಂದಿಸಿದ ಸಮಯದಲ್ಲಿ ಆಗ ಸಂಗನಬಸವೇಶ್ವರಸ್ವಾಮಿಗಳು ಈ ವಚನಶಾಸ್ತ್ರದ ಅಭಿಧಾನಕ್ಕೆ ಟಿಪ್ಪಣಿಯ ಮಾಡಿ, ಸಕಲಪ್ರಮಥಗಣಂಗಳ ಸ್ತೋತ್ರಂಗೈದು ಮಂಗಳಾರತಿಯನೆತ್ತಿ ಅನಾದಿಸೂತ್ರವ ಹೇಳಿ ಸಮಾಪ್ತವ ಮಾಡುವ ಪ್ರಸ್ತಾವದ ವಚನ. ಟೀಕು : ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರಿಂದ ಪೂಜಾ ನಮಸ್ಕಾರಕ್ಕೆ ಕರ್ತುವಾದ ಪರಶಿವಮೂರ್ತಿ, ಅಂತಪ್ಪ ಪರಶಿವಮೂರ್ತಿಯೆ ಐವರಿಗೆ ಅನಾದಿಯು. ಅಂತಪ್ಪ ಪರಶಿವ ಸದ್ಭಕ್ತನ ಕರ ಮನ ಸುಭಾವದಲ್ಲಿ ಪೂಜೆಗೊಂಬ ನಿಃಕಲಪರಶಿವಮೂರ್ತಿ ಗುರುಲಿಂಗಜಂಗಮವೆ ಅನಾದಿಗೆ ಅನಾದಿಯಾಗಿರ್ಪುದೆಂಬುದೀಗ `ಅನಾದಿ ಎಂಬ ಶಬ್ದಕ್ಕರ್ಥ. ಹೀಂಗೆ ಒಪ್ಪಲ್ಪಟ್ಟಂಥ ನಿಃಕಲಪರಶಿವಮೂರ್ತಿ ಗುರುಲಿಂಗಜಂಗಮದ ಚಿದಾಂಶವೆ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬುದೀಗ ‘ಷಟ್ಸ್ಥಲ’ ಎಂಬ ಶಬ್ದಕ್ಕರ್ಥ. ಬ್ರಹ್ಮ ವಿಷ್ಣು ಇಂದ್ರ ಚಂದ್ರ ಮನು ಮುನಿ ದೇವ ದಾನವ ಮಾನವರೆಲ್ಲ ಬಿದ್ದ ಭವಪಾಶಂಗಳ ದಾಂಟಿ, ಸರ್ವಸಂಗಪರಿತ್ಯಾಗತ್ವದಿಂದಿರ್ಪರು ಭಕ್ತಮಹೇಶ್ವರರೆಂಬುದೀಗ ನಿರಾಭಾರಿ ಎಂಬ ಶಬ್ದಕ್ಕರ್ಥ. ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿಯೆಂಬ ಷಣ್ಮತದವರೆ ಶೈವರು! ಗೊಲ್ಲಾಳಯ್ಯ ಬಳ್ಳೇಶಮಲ್ಲಯ್ಯ ಗುರುಭಕ್ತಯ್ಯ ಮೊದಲಾದ ನವಮುಗ್ಧರೆ ವೀರಶೈವರು. ಇವ ಎರಡನು ಹಿಡಿದು ಬಳಸುವರೆ ಅಪಶೈವರು. ಇಂತೀ ಶೈವ-ವೀರಶೈವ ಅಪಶೈವಂಗಳಿಗೆ ಉಪರಿಯಾಗಿ ಉಪಾಧಿಮಾಟಸ್ಥಲವಿಡಿದು ಒಪ್ಪಲ್ಪಟ್ಟಂಥಾದೆ ಸಾಮಾನ್ಯ ವೀರಶೈವವೆನಿಸುವುದು. ಈ ಸಾಮಾನ್ಯ ವೀರಶೈವ ಅಪಶೈವಂಗಳಿಗೆ ಉಪರಿಯಾಗಿ ಗುರುಲಿಂಗಜಂಗಮಭಕ್ತಿಯಿಂದ ನಿರುಪಾಧಿಕಮಾಟಸ್ಥಲವಿಡಿದು ಒಪ್ಪಲ್ಪಟ್ಟಂಥಾದೆ ವಿಶೇಷ ವೀರಶೈವವೆನಿಸುವುದು. ಆ ವಿಶೇಷ ವೀರಶೈವಕ್ಕೆ ಉಪರಿಯಾಗಿ ಅಷ್ಟಾವರಣಂಗಳಂತರಂಗ ಬಹಿರಂಗದಲ್ಲಿ ಸಂಬಂಧಾಚರಣೆಗಳಿಂದ ಅಚ್ಛಾದಿಸಿಕೊಂಡು ತನ್ನ ತಾನೆ ಪೂಜ್ಯಪೂಜಕತ್ವದಿಂದಿರ್ಪುದೆಂಬುದೀಗ ‘ನಿರಾಭಾರಿವೀರಶೈವ’ ಎಂಬ ಶಬ್ದಕ್ಕರ್ಥ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ,ಧಾರಣ, ಸಮಾಧಿಯೆಂಬ ಹಠಯೋಗಿಗಳಿಗೆ ಉಪರಿಯಾಗಿ ರಾಜಿಸುವಂಥ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯಸ್ಥಲಂಗಳ ಮೀರಿ ನಿರಾವಯ, ನಿಃಶೂನ್ಯ, ನಿರಂಜನಸ್ಥಲದಲ್ಲಿ ನಿಂದ ಶಿವಯೋಗಿ ಎಂಬುದೀಗ `ಶರಣ' ಎಂಬ ಶಬ್ದಕ್ಕರ್ಥ. ಭಕ್ತಸ್ಥಲ ಹದಿನೈದು, ಮಹೇಶ್ವರಸ್ಥಲ ಒಂಬತ್ತು, ಪ್ರಸಾದಿಸ್ಥಲ ಏಳು, ಪ್ರಾಣಲಿಂಗಿಸ್ಥಲ ಐದು, ಶರಣಸ್ಥಲ ನಾಲ್ಕು, ಐಕ್ಯಸ್ಥಲ ನಾಲ್ಕು, ಆಚಾರಲಿಂಗಸ್ಥಲ ಒಂಬತ್ತು, ಗುರುಲಿಂಗಸ್ಥಲ ಹನ್ನೆರಡು, ಪ್ರಸಾದಲಿಂಗಸ್ಥಲ ಒಂಬತ್ತು, ಮಹಾಲಿಂಗಸ್ಥಲ ಒಂಬತ್ತು ಇಂತೀ ನೂರೊಂದುಸ್ಥಲಗಳೆ ಶರಣಂಗೆ ಮಾರ್ಗಕ್ರಿಯಾಸ್ವರೂಪವಾದವೆಂಬುದೀಗ ನಿಜ ಆಚರಣೆ ಎಂಬ ಶಬ್ದಕರ್ಥ. ಭಕ್ತನಂಗಸ್ಥಲ ಹದಿನೆಂಟು, ಮಹೇಶ್ವರನಂಗಸ್ಥಲ ಹದಿನೆಂಟು, ಪ್ರಸಾದಿಯಂಗಸ್ಥಲ ಹದಿನೆಂಟು, ಪ್ರಾಣಲಿಂಗಿಯಂಗಸ್ಥಲ ಹದಿನೆಂಟು, ಶರಣನಂಗಸ್ಥಲ ಹದಿನೆಂಟು, ಐಕ್ಯನಂಗಸ್ಥಲ ಹದಿನೆಂಟು, ಆಚಾರಲಿಂಗಸ್ಥಲ ಹದಿನೆಂಟು, ಗುರುಲಿಂಗಸ್ಥಲ ಹದಿನೆಂಟು, ಶಿವಲಿಂಗಸ್ಥಲ ಹದಿನೆಂಟು, ಜಂಗಮಲಿಂಗಸ್ಥಲ ಹದಿನೆಂಟು, ಪ್ರಸಾದಲಿಂಗಸ್ಥಲ ಹದಿನೆಂಟು, ಮಹಾಲಿಂಗಸ್ಥಲ ಹದಿನೆಂಟು, ಇಂತೀ ಇನ್ನೂರ ಹದಿನಾರು ಸ್ಥಲಂಗಳೆ ಶರಣಂಗೆ ಮೀರಿದ ಕ್ರಿಯಾಸ್ವರೂಪವಾದವೆಂಬುದೀಗ, ‘ಸಂಬಂಧ’ ಎಂಬ ಶಬ್ದಕ್ಕರ್ಥ. ಆಜ್ಞಾ, ಉಪಮಾ, ಸ್ವಸ್ತಿಕಾರೋಹಣ, ಕಲಶಾಭಿಷೇಕ ವಿಭೂತಿಪಟ್ಟ ಲಿಂಗಾಯತ ಲಿಂಗಸ್ವಾಯತ, ಸಮಯ ನಿಃಸಂಸಾರ ನಿರ್ವಾಣ ತತ್ವ ಆಧ್ಯಾತ್ಮ, ಅನುಗ್ರಹ, ಸತ್ಯಶುದ್ಧ ಏಕಾಗ್ರಚಿತ್ತ, ದೃಢವ್ರತ, ಪಂಚೇಂದ್ರಿಯಾರ್ಪಿತ, ಅಹಿಂಸೆ, ಲಿಂಗನೈಷ್ಠೆ, ಮನೋರ್ಲಯ ಸದ್ಯೋನ್ಮುಕ್ತಿ ಇಂತೀ ಇಪ್ಪತ್ತೊಂದು ದೀಕ್ಷೆಗಳ ಶರಣನ ಮಾರ್ಗಕ್ರಿಯಾ ಮೀರಿದಕ್ರಿಯವನೊಳಕೊಂಡು ಸನ್ಮಾರ್ಗ ನಡೆನುಡಿಗಳಾಗಿರ್ಪುವೆಂಬುದೀಗ ‘ಬೋಧಾಮೃತ’ ಎಂಬ ಶಬ್ದಕ್ಕರ್ಥ. ನೂರೊಂದು ಸ್ಥಲಂಗಳೆ ಚಿದಂಗ ಚಿದ್ಘನಲಿಂಗವಾಗಿ ಇನ್ನೂರ ಹದಿನಾರು ಸ್ಥಲಂಗಳೆ ಚಿತ್ಪ್ರಾಣಾಂಗ ಚಿತ್ಪ್ರಾಣಲಿಂಗವಾಗಿ ಏಕವಿಂಶತಿ ದೀಕ್ಷೆಗಳೆ ಚಿದ್ಭಾವಾಂಗ ಚಿದ್ಭಾವಲಿಂಗವಾಗಿ ಇಂತು ಶರಣನ ಅಂಗ ಪ್ರಾಣ ಭಾವಂಗಳೆಲ್ಲ ಇಷ್ಟ ಪ್ರಾಣ ಭಾವ ಆಚರಣೆ ಸಂಬಂಧ ಸ್ವರೂಪಗಳಿಂದ ಒಪ್ಪುತ್ತಿರ್ಪವೆಂಬುದೀಗ ‘ನಿಲುಕಡೆ’ಎಂಬ ಶಬ್ದಕ್ಕರ್ಥ. ಸದ್ಭಕ್ತನ ಆಚಾರಲಿಂಗಾನುಭಾವ ವೀರಮಾಹೇಶ್ವರನ ಗುರುಲಿಂಗಾನುಭಾವ ಶಿವಪ್ರಸಾದಿಯ ಶಿವಲಿಂಗಾನುಭಾವ ನಿಜಪ್ರಾಣಲಿಂಗಿಯ ಚರಲಿಂಗಾನುಭಾವ ನಿರಾಲಂಬನ ನಿಃಕಳಲಿಂಗಾನುಭಾವ ನಿಜೈಕ್ಯನ ಮಹಾಲಿಂಗಾನುಭಾವ ನಿರಾವಯನ ನಿಃಶೂನ್ಯಲಿಂಗಾನುಭಾವ ನಿರ್ಮಾಯನ ನಿರಂಜನಲಿಂಗಾನುಭಾವ ಇಂತು ನವಲಿಂಗಾನುಭಾವಂಗಳೆ ಶರಣನಂತರಂಗದಲ್ಲಿ ಮಹಾಜ್ಞಾನಪ್ರಕಾಶದಿಂದ ಒಪ್ಪುತ್ತಿರ್ಪವೆಂಬುದೀಗ ‘ಚಿದೈಶ್ವರ್ಯ’ಎಂಬ ಶಬ್ದಕ್ಕರ್ಥ. ಅರವತ್ತುನಾಲ್ಕು ತೆರೆದ ಆವರಣಂಗಳು ನೂರ ನಾಲ್ವತ್ತುನಾಲ್ಕು ಆಚಾರಂಗಳು ಮುನ್ನೂರ ಇಪ್ಪತ್ತು ನಾಲ್ಕು ಚಕ್ರಂಗಳು ಸರ್ವಾಚಾರಸಂಪತ್ತಿನ ಮೂವತ್ತೆರಡು ಉದ್ಧರಣೆಗಳು ಶಿವಯೋಗಸ್ಥಾಪನಸ್ಥಲ ಪ್ರಾಣಲಿಂಗಪೂಜಾವಿಧಾನಸ್ಥಲ ನವಲಿಂಗಾರ್ಚನಾಸ್ಥಲ, ಪರತತ್ವಲಿಂಗಪ್ರಕಾಶನಸ್ಥಲ ಶಿವಾದ್ವೈತ ಶರಣಪ್ರಕಾಶಸ್ಥಲ ಮಹಾಲಿಂಗೈಕ್ಯಸ್ಥಲ ಜ್ಞಾನಶೂನ್ಯಸ್ಥಲವೆಂಬ ಏಳು ಮಂತ್ರಗೋಪ್ಯಂಗಳು ಅಷ್ಟವಿಧ ಮಹಾಮಂತ್ರ ಸಕೀಲ ಸಮಾಧಿ ಮೊದಲಾದ ಚಿತ್ಪ್ರಕಾಶಂಗಳು ಶರಣಂಗೆ ಆಭರಣವಾಗಿರ್ಪುದು. ಶ್ರೀಗುರು ಸಿದ್ಧಲಿಂಗೇಶ್ವರನ ಕೃಪಾಪ್ರಸನ್ನತ್ವದಿಂದ ಎನ್ನ ಕರ ಮನ ಸುಭಾವದಲ್ಲಿ ಪ್ರಭಾವಿಸುವ ಚಿದ್ಘನ ಇಷ್ಟಮಹಾಲಿಂಗದ ಬೆಳಗಿನೊಳಗೆ ಕಂಡೆನೆಂಬುದೀಗ ‘ಚಿದಾಭರಣ’ಎಂಬ ಶಬ್ದಕ್ಕರ್ಥ. ಹೀಂಗೆ ಅನಾದಿವಿಡಿದು ಬಂದ ಗುರುಲಿಂಗ ಜಂಗಮ ಅನಾದಿವಿಡಿದು ಬಂದ ಪಾದೋದಕ ಪ್ರಸಾದ ಅನಾದಿವಿಡಿದುಬಂದ ವಿಭೂತಿ ರುದ್ರಾಕ್ಷಿ ಅನಾದಿವಿಡಿದುಬಂದ ತ್ರಯಾಕ್ಷರ ಪಂಚಾಕ್ಷರ ಷಡಕ್ಷರ ಅನಾದಿವಿಡಿದು ಬಂದ ಗುರು ಶಿಷ್ಯ ಅಂಗ ಲಿಂಗ ಭಕ್ತ ಜಂಗಮ ಶರಣಸಂಬಂಧ, ಅನಾದಿವಿಡಿದು ಬಂದ ಆಚಾರ ಆಚರಣೆ ಸಂಬಂಧ ಸತ್ಕ್ರಿಯಾ ಜ್ಞಾನಸ್ವರೂಪ ನಿಲುಕಡೆ ಅನಾದಿವಿಡಿದುಬಂದ ಭಕ್ತಿ ಜ್ಞಾನ ವೈರಾಗ್ಯ ಸಕೀಲಸಂಬಂಧ ಶಿವಯೋಗ ಶಿವಾನುಭಾವದ ನಿಜಮಹಾಲಿಂಗೈಕ್ಯಾನುಭಾವ ನೋಡಾ ಶ್ರೀಗುರುಸಿದ್ಧಲಿಂಗೇಶ್ವರರಿಗೆ ರೂಪು ರುಚಿತೃಪ್ತಿಯಾದ ಬಸವಲಿಂಗೇಶ್ವರ.