Index   ವಚನ - 8    Search  
 
ಅತರ್ಕ್ಯನ ತರ್ಕಮುಖದಲ್ಲಿ ಸಾಧಿಸಿದೆನೆಂದಡೆ, ನಿಮ್ಮ ತರ್ಕಶಾಸ್ತ್ರಕೊಂಬುದೆ ಎಲೆ ತರ್ಕಿಗರಿರಾ. ಅಪ್ರಮಾಣನನ ಪ್ರಮಾಣಿಸಿದೆನೆಂದಡೆ ನಿಮ್ಮ ಪ್ರಮಾಣೆಲ್ಲಿಗೆ ಬಹವೆಲೆ ಅಪ್ರಮಾಣಕರಿರಾ. ವೇದ ವೇಧಿಸಲರಿಯದೆ `ಚಕಿತಮಭಿದತ್ತೇ' ಎನಲು, ಅಂತ್ಯನಾಸ್ತಿಯಾದ ಮಹಾಂತಂಗೆ ನಿಮ್ಮ ವೇದಾಂತವೇಗುವವು ಎಲೆ ವೇದಾಂತಿಗಳಿರಾ. ಕರ್ಮಾದಿರಹಿತ ನಿರ್ಮಾಯ ಶಿವಂಗೆ ನಿಮ್ಮ ಕರ್ಮಂಗಳೆಲ್ಲಿಗೆ ನಿಲುಕವವು ಎಲೆ ಪ್ರಭಾತರಿರಾ. ಕಾಲಂಗೆ ಕಾಲ ಮಹಾಕಾಲ ಕಾಲಾತೀತ ಮಹಾದೇವಂಗೆ ನಿಮ್ಮ ಕಾಲವೇದವೇಗುವವು ಎಲೆ ಭ್ರಾಂತರಿರಾ. ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ | ಅನಿಂದಿತಮನೌಪಮ್ಯಂ ಅಪ್ರಮೇಯಮನಾಮಯಂ ಶುದ್ಧತ್ವಂ ಶಿವಮುದ್ದಿಷ್ಟಂ ಪರಾದೂರ್ಧ್ವಂ ಪರಾತ್ಪರಂ || ಇಂತೆಂದುದಾಗಿ, ದರುಶನವಾದಿಗಳೆಲ್ಲ ದರುಷನ ಭ್ರಮೆಯ ಬಿಟ್ಟು ಹರುಷದಿಂದ ಭಜಿಸಿ ಬದುಕಿರೆ, ಬಸವಪ್ರಿಯ ಕೂಡಲಚನ್ನಸಂಗಯ್ಯನ.