Index   ವಚನ - 25    Search  
 
ಎನ್ನ ಸದ್ಗುರು ತನ್ನ ಕರಕ್ಕೆ ಮಹತ್ತಪ್ಪ ಲಿಂಗದೊಳಗೆ ಆ ಮಹಾಘನ ಗುರುವಪ್ಪ ಪರಶಿವ ಮೂರ್ತಿಗೊಂಡನು. ಆ ಮೂರ್ತಿಯ ನಿಶ್ಚೈಸಲೆಂದು ಪ್ರಸನ್ನಿಸಿದವು. ಶ್ರೀವಿಭೂತಿ ರುದ್ರಾಕ್ಷಿಗಳೆಂಬ ಜ್ಯೋತಿ ಲಿಪಿಯ ಮುದ್ರೆಗಳು. ಇಂತಪ್ಪ ದಿವ್ಯಸಾಧನವಿಡಿದು, ಆತನ ಕರಸ್ಥಲದೊಳೊಪ್ಪುತಿಪ್ಪ ದಿವ್ಯವಸ್ತುವ ಕಾಣಲೊಲ್ಲದೆ, ಅಜ್ಞಾನವಶದಿಂದ ಕೈವಶವಾದ ವಸ್ತುವ ಬಿಟ್ಟು, ಅತ್ತ ಬೇರೆ ವಸ್ತುವುಂಟೆಂದು ಬಯಲನಾಹ್ವಾನಿಸಿ, ಅಲ್ಲಿ ವಸ್ತುವಿನ ನಿಶ್ಚಯವ ಕಾಣದೆ, ಭವ ಭವದ ಲೆಂಕರಾಗಿ ಬರಿದೆ ಬಳಲುತ್ತಿಪ್ಪ ಈ ತಾಮಸ ಜೀವಿಗಳಿಗೆ ಲಿಂಗದ ಹಂಗಿನ್ನೇತಕಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.