Index   ವಚನ - 35    Search  
 
ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನಕ್ಕ ಮಹೇಶ್ವರನಲ್ಲ, ಫಲವುಳ್ಳನ್ನಕ್ಕ ಪ್ರಸಾದಿಯಲ್ಲ. ಕುಲ ಗುರುಕೃಪೆಯ ಕೆಡಿಸಿತ್ತು, ಛಲ ಲಿಂಗಾರ್ಚನೆಯ ಕೆಡಿಸಿತ್ತು. ಫಲ ದುಃಖಂಗಳಿಗೆ ಗುರಿ ಮಾಡಿತ್ತು. ಕುಲಂ ಛಲಂ ಧನಂ ಚೈವ ಯೌವನಂ ರೂಪಮೇವ ಚ | ವಿದ್ಯಾ ರಾಜ್ಯಂ ತಪಶ್ಚೈವ ತೇ ಚಾಷ್ಟಮದಾ ಸ್ಮೃತಾಃ || ಎಂದುದಾಗಿ, ಒಂದು ಸುರೆಯ ಕುಡಿದವರು ಬಂಧುಬಳಗವನರಿಯರು. ಎಂಟು ಸುರೆಯ ಕುಡಿದವರು ನಿಮ್ಮನೆತ್ತಬಲ್ಲರಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ?