Index   ವಚನ - 91    Search  
 
ಶ್ರುತ್ಯಾಗಮ ಶಾಸ್ತ್ರಾದಿಗಳು ದೈವವಲ್ಲದಿರಲಾ, ಸ್ವರ್ಗಮೋಕ್ಷಂಗಳಿಗೆ ಶ್ರುತ್ಯಾಗಮ ಶಾಸ್ತ್ರಪ್ರಮಾಣ ಸಾಧನವೆಂಬ ಕರ್ಮವಾದಿಗಳಿಗೆ ನಿರುತ್ತರೋತ್ತರವ ಕೇಳಿರೆ: || ಶ್ರುತಿ || `ಜ್ಯೋತಿಷ್ಠೋಮೇನ ಸ್ವರ್ಗಕಾಮೋ ಯಜಜೇತ' ಎಂಬ ವೇದವಾಕ್ಯದ ಬಲುಮೆವಿಡಿದು ನುಡಿವರೆ, ಯಜ್ಞದಿಂದ ಸ್ವರ್ಗಾಪೇಕ್ಷಿತನು ಅಗ್ನಿಯನೆ ಪೂಜಿಸುವಯೆಂದು, ಕ್ರಿಯಾಕರ್ಮವೆ ದೈವವೆಂದು, ತಾನು ಮಾಡಿದ ಕರ್ಮ ಫಲವು ತನಗೆ ಅನುಭವಿಸಲುಳ್ಳದೆಂದು, ಕರ್ಮಕ್ಕೆ ಕರ್ತೃತ್ವವನ್ನು ಕೆಲಬರು ಕರ್ಮವಾದಿಗಳು ಹೇಳುತ್ತಿಹರು. ಅಹಂಗಲ್ಲ, ಕರ್ಮವೆ ಶರೀರದಿಂದನುಭವಿಸಲುಳ್ಳರಾಗಿ ವರ್ತಿಸುತ್ತಿಹುದೊ, ಅಲ್ಲ, ಮತ್ತಾ ಶರೀರಕ್ಕೆ ಕರ್ಮವೆ ಅನಾದಿಯಹುದೊ, ಈ ಕರ್ಮಕ್ಕೆ ಕಾಯಂಗಳೆರಡು ಜೀವಾತ್ಮನನು ಒಂದೆಬಾರಿಯಯಿದಿದೊ. ಈ ಹಿಂಗೆಂದು ಕೆಲಬರು ತರ್ಕಿಸುವರು. ಅದು ಹಂಗಾಗದಿಹುದಲ್ಲದೆ, ಆ ಕರ್ಮವು ಕ್ಷಣಿಕವಾಗಿಯೂ ಅಚೇತನವಾಗಿಯೂ ನಿರ್ಗುಣವಾಗಿಯೂ ಕಾಣಲುಳ್ಳದಾಗಿ, ಅದು ಮಾಡುವಾತನನುಯೆ ಹಾಂಗೆಯಿಹುದು. ಆ ಕರ್ತನು ಆವನೊಬ್ಬನು ಅಪರಾಧವ ಮಾಡಿದವ, ಮಾಡಿದ ಪುರುಷನು ಆ ಅಪರಾಧಕ್ಕೆ ತಕ್ಕುದಾದ ಶಿಕ್ಷೆಯನು ತನಗೆ ತಾನೆ ಮಾಡಿದನೊಯೇನು ಅಲ್ಲ. ಮತ್ತೆ ಆ ಅಪರಾಧವೆ ಸಂಕಲಿಯಾಗಿ, ಆ ಅಪರಾಧಿಯ ಕಾಲ ಬಂದಿಸುಹವನು. ಮಾಡೊದೊಯೇನು ಅಲ್ಲ. ಮತ್ತೆ ಆ ಅಪರಾಧಿಗೆ ಕರ್ಮಿಗೆ ಆ ಕರ್ಮವನು ಸಂಘಟಿಸಲು, ಕರ್ಮಾಧೀನನಲ್ಲದಾತನಾಗಿ, ಸ್ವತಂತ್ರನಾಗಿ, ಸರ್ವೇಶ್ವರ ಎಲ್ಲದಕ್ಕೂ ಒಡೆಯನಾಗಿ, ಸರ್ವಗತನಾಗಿ ಸರ್ವಗತನಾದ ಶಿವನು ಉಂಟಾಗಿ ಕರ್ಮಕ್ಕೆವೂ ಕರ್ಮಿಗೆವೂ ಕರ್ತೃತ್ವವಾಗದು. ಈ ಹಿಂಗಾಂಗದಿಹುದೆ ಪೂರ್ವಮೀಮಾಂಸವನು ಹೇಳುವ ಒಬ್ಬುಳಿಯ ಕರ್ಮಂಗಳು ಬೇರೆ ಬೇರೆ ಆರು ಕೆರಂಗಳಾಗುತಿಹವು. ಅವಾವೆನಲು, ಅಮಾವಾಸ್ಯೆ ಹುಣ್ಣಿಮೆಗಳಲಿ ಪಿತೃಕಾರ್ಯ ಮೊದಲಾದ ಕರ್ಮಂಗಳ ಮಾಡಬೇಕಾದುದರಿಂದ ಒಂದಾನೊಂದು ಸಂಸ್ಕಾರವನ್ನು ಸಂಘಟಿಸುತ್ತಿಹವು. ಆ ಸಂಸ್ಕಾರರೂಪಂಗಳಾದ ಆರು ಅಪೂರ್ವಂಗಳಾಗುತ್ತಿಹವು. ಅವು ಬೇರೊಂದು ಪ್ರಮಾಣದಿಂದ ಪೂರ್ವಮಾಗಿ ಉತ್ಕೃಷ್ಟವಾದ ಅಪೂರ್ವವನ್ನು ಹುಟ್ಟಿಸುತ್ತಿಹವು. ಆ ಉತ್ಕೃಷ್ಟವಾದ ಪೂರ್ವದಿಂದ ಮಾತಲುಳ್ಳ ಫಲದ ಕಡೆವು. ಅದೇ ದೈವವೆಂದು ಕಾಣಬಾರದೆಂದು, ಕರ್ಮವೆಂದು ನಾಮ ಮೂರಾರದವರಿಂದ ದೇಹಾಂತರ ಲೋಕಾಂತರ ದೇಶಾಂತರ ಕಾಲಾಂತರಗಳಲ್ಲಿ ಅದು ಆತಂಗೆ ಅನುಭವಿಸಬೇಕಾದ ಫಲಂಗಳನು ಕೊಡುತ್ತಿಹುದೆಂಬ ವಚನ ವ್ಯರ್ಥವು. ಅದು ಹೇಗೆಂದಡೆ, ಜಡಸ್ವರೂಪವಾದ ಕರ್ಮವು ದೇಹಾಂತರ ಮೊದಲಾದವರಲ್ಲಿ ಆ ಫಲವನು ಕೊಡಲು ಸಮರ್ಥವಲ್ಲದಿಹುದೆ. ಈ ಹಿಂಗಾಗಿ ಒಡೆಯನನು ತೊಲಗಿಸಿ, ಕರ್ಮಫಲವನು ಕೊಡವದಹುದೆ. ಅಹಂಗಾದಡೆ, ಜೈನ ಬೌದ್ಧ ಭಾಷಾದಿ (?) ಕರ್ಮವಾದಿಗಳ ಜಪತಪದಾನಧರ್ಮಫಲಂಗಳು ವ್ಯರ್ಥಂಗಳಾಗುತಿರಲು, ಅವು ಪುಷ್ಟಿವರ್ಧನಭೂತವಾದ ಭೋಜನಕ್ರಿಯೆಗಳಿಂದಯೆಹಾಹಂಗೆ ಮರಣವು ಆಯಿತ್ತು. ಅಹಂಗೆ ಒಂದೆ ಕರ್ಮವು ಫಲವು ಕೊಡಲು ಸಮರ್ಥವಲ್ಲ. ಅಹಂಗಾಗದಿಹುದೆ ಭೋಜನವ ಮಾಡಿದ ಮಾತ್ರವೆ ಪುಷ್ಟಿಯಾಗುತ್ತಿಹುದು ಮರಣವಿಲ್ಲದಿಹುದು. ಹಿಂಗಲ್ಲವೊ ಎಂದಡೆ, ಕೆಟ್ಟ ಕರ್ಮವುಯೆಯ್ದಿತ್ತು. ಉಂಡದರೊಳಗೆ ಸಿಲ್ಕಿದ ಅನ್ನವು ವಿಷವಹುದಲಾ. ಪುಷ್ಟಿಯ ತೊಲಗಿಸಿ ಮರಣವನು ಅಹಂಗೆ ಕೊಡುತ್ತಿರದು. ಇದು ಕಾರಣ, ಸರ್ವಗತನಾದ ಶಿವನು ಅರಿಕರ್ಮಕ್ಕೆ ತಕ್ಕ ಫಲವ ಕೊಡುವಾತನು. ಹಿಂಗಾಗಿರಲಿ, ಕರ್ಮಕ್ಕೆ ತಾನೆ ಕರ್ತೃತ್ವವಾಗುಹವು, ಆಗುತ್ತಿರದು. ಮತ್ತೆಯೂ ದೃಷ್ಟಾಂತರ ಸರಳು ಬಿಲ್ಲಕಾರನಿಲ್ಲದೆ ತಾನು ಗುರಿಯ ತಾಗೂದೆಯೇನು? ಅಹಂಗೆ, ಕರ್ಮವು ಶಿವಪ್ರೇರಣೆಯಿಲ್ಲದೆ ಅಕರ್ಮಿಗೆ ಮೇಲುಕೀಳಾದ ಕರ್ಮಫಲವನು ತಾನೆ ಕೊಡಲು ಸಾಮಥ್ರ್ಯವಿಲ್ಲ, ತಪ್ಪದು. ವಾಯುವ್ಯದಲ್ಲಿ: ಅಜ್ಞೋ ಜಂತುರನೀಶೋಯಮಾತ್ಮನಃ ಸುಖದುಃಖಯೋಃ | ಈಶ್ವರಃ ಪ್ರೇರಿತೋ ಗಚ್ಛೇತ್ಸ್ವರ್ಗಂ ವಾ ಶ್ವಭ್ರಮೇವ ವಾ || ಅದು ಕಾರಣ, ಅರಿಯದವನಾಗಲಿ ಅಯಂ ಜಂತು-ಈ ಪ್ರಾಣಿ, ಆತ್ಮನಃ-ತನ್ನ, ಸುಖದುಃಖಯೋಃ-ಸುಖದುಃಖಂಗಳಿಗೆ, ಅನಿಶಃ-ಒಡೆಯನಲ್ಲ. ಈಶ್ವರ ಪ್ರೇರಿತ ಶಿವನು ಪ್ರೇರಿಸಲುಳ್ಳವನಾಗಿ, ಸ್ವರ್ಗವನಾದಡೂ ನರಕವನಾದಡೂ ಎಯ್ದುವನು. ನಾಭುಕ್ತ ಕ್ರಿಯತೇ ಕರ್ಮ ಕಲ್ಪಕೋಟಿಶತೈರಪಿ | ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ || ಇವು ಮೊದಲಾದ ವಚನ ಪ್ರಮಾಣದಿಂದ ಕರ್ಮವು ಕಲ್ಪಕೋಟಿ ಶತಂಗಳಿಂದಡಾ ಅನುಭವಿ[ಸು]ತಿಹದು. ಮಾಡಲುಳ್ಳದಾಗಿ ಮೇಲು ಕೀಳಾದವು. ಏನ ಮಾಡಿಯೂ ಅನುಭವಿಸಬೇಕಾದುದು, ಈ ಹಿಂಗೆಂಬ ವಚನವು ವ್ಯರ್ಥ ಪೋಗುತ್ತಿಹುದು. ಅದು ಹೇಂಗೆಯಾಯೆಂದಡೆ: ವಾಯವ್ಯದಲ್ಲಿ- ಅಹೋವಿಪರ್ಯಾಸಶ್ಚೇ ಮೇದೋ ಯಾವದ್ವರಂ ಯಜಮಾನ ಸ್ವಯಂ ದಕ್ಷಃ | ಬ್ರಹ್ಮಪುತ್ರ ಪ್ರಜಾಪತಿಃ ಧರ್ಮಾದಯಃ ಸದಸ್ಯಾಶ್ಚ ರಕ್ಷಿತಾ ಗರುಡಧ್ವಜಃ ಭಾನಾಶ್ಯಪ್ರತಿಗ್ರುಣ್ವಂಕ್ತಿ ಸಾಕ್ಷಾದಿಂದ್ರಾದಯಸ್ವರಾಃ ತಥಾಪಿ ಯಜಮಾಸ್ಯದಕ್ಷಸ್ಯಾ ದಾಹಂರ್ತಿಜಃ ಸದ್ಯಯೇವ ಶಿರಶ್ಛೇದ ಸಾಧುಸಂಪದ್ಯತೇ ಫಲಂ ಕೃತ್ವಾತು ಸಮಹತ್ಪುರಣ್ಯಾಮಿಷ್ಟ ಯಶಶತೈರಪಿ ನ ತತ್ಫಲಮವಾಪ್ನೋತಿ ಭಕ್ತಿಹೀನೋ ಯದೀಶ್ವರೇ | ಈ ಅರ್ಥದಲ್ಲಿ ಸತ್ಪುರುಷರ ವೇದದಿಂದರಿಯಲು, ತಕ್ಕುದಾದ ಆಚಾರವನು ಬಿಟ್ಟು ಒಡನೆ ಹುಟ್ಟಿದುದಾದ ತನ್ನವರೆಂಬ ಸ್ನೇಹದಲ್ಲಿ ಹುಟ್ಟಿದುದಾ[ದ] ಚರಣವನ್ನು ಬಿಟ್ಟು, ಅಪಾಯರಹಿತವಾಗಿ ಪ್ರಮಥಪದವಿಯನು ಎಯ್ದಿದನು. ಈ ಹಿಂಗಾಗಿಯೇ, ಬರಿಯ ಕರ್ಮಕ್ಕೆ ಕರ್ತೃತ್ವವುಂಟಾಗುತಿಹುದೆ? ಚಂಡೇಶ್ವರನಿಂದ ತನ್ನ ತಂದೆಯಾದ ಬ್ರಾಹ್ಮಣನ ಕಾಲುಗಳ ತರಿದಲ್ಲಿ, ಆ ದೋಷಫಲವುಯಹಂಗೆ ಇಲ್ಲವಾಯಿತ್ತು. ಮಾಮನಾದೃತ್ಯ ಪುಣ್ಯಂ ವಸ್ಯಾಂತ್ಪ್ರತಿಪಾದಿನಃ | ಮನ್ನಿ ಮಿತ್ತಕೃತಂ ಪಾಪಂ ಪುಣ್ಯಂ ತದಪಿ ಜಾಯತೇ || ಇದು ಶಿವನ ನುಡಿ, ಮಾರಿಯೆನ್ನನು ಕೈಕೊಳ್ಳದ ಪುಣ್ಯವಾದಡೆಯು, ಮಾಡುವವಂಗೆ ಪಾಪವು ಅಹುದು. ನಾನು ನಿಮಿತ್ತ ಮಾಡಿದ ಪಾಪವಾಯಿತ್ತಾದಡೆಯು ಸುಕೃತವಾಗುತ್ತಿಹುದು. ಉಪಕ್ರಮ್ಯ ಕರ್ಮಾದಿ ಪತಿತ್ವ ವಿರುಪಾಕ್ರೋಸ್ಥಿತಿ ಸರ್ವಕರ್ಮಾದಿ ಪತಿಃ' ಮತ್ತೆ ಉಪಕ್ರಮಿಸಿ ಕರ್ಮಂಗಳಿಗೊಡೆಯನು ಪರಮೇಶ್ವರನು ಉಂಟೆಂಬ ವೇದವು ಮೊದಲಾದ ವಾಕ್ಯಪ್ರಮಾಣದಿಂದ, ನಾನಾ ಪುರಾಣ ವಚನ ಪ್ರಮಾಣದಿಂದ ಸಮಸ್ತ ಕರ್ಮಂಗಳಿಗೊಡೆಯನು ಶಿವನು. ಆ ಶಿವನ ತೊಲಗಿಸಿ, ಬರಿಯ ಕರ್ಮಕ್ಕೆ ಕರ್ತನಾಗುಹವು ಇಲ್ಲದಿರುತ್ತಿಹುದು. ಇದನರಿದು, ಎಲೆ ಕರ್ಮವಾದಿಗಳಿರಾ, ಸಕಲಕರ್ಮಕ್ಕೆ ಶಿವನೆ ಕರ್ತುವೆಂದರಿದಿರಾದಡೆ, ಬಸವಪ್ರಿಯ ಕೂಡಲಚೆನ್ನಸಂಗ ನಿಮಗೆ ಸುಕರ್ಮ ಫಲವನು ಕೊಡುವ ಕಂಡಿರೆ.