Index   ವಚನ - 1    Search  
 
ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ ಶಿವಯೋಗಿ ಸಮಾಧಾನಿಯಾಗಿರಬೇಕು. ಅಪ್ಪುವಿನ ನಿರ್ಮಳದಂತೆ ಶಿವಯೋಗಿ ನಿರ್ಮಳನಾಗಿರಬೇಕು. ಪಾವಕನು ಸಕಲದ್ರವ್ಯಂಗಳ ದಹಿಸಿಯೂ ಲೇಪವಿಲ್ಲದ ಹಾಂಗೆ ಶಿವಯೋಗಿ ನಿರ್ಲೇಪಿಯಾಗಿರಬೇಕು. ವಾಯು ಸಕಲದ್ರವ್ಯಂಗಳಲ್ಲಿ ಸ್ವರ್ಶನವ ಮಾಡಿಯೂ ಆ ಸಕಲಗುಣವ ಮುಟ್ಟದ ಹಾಂಗೆ ಶಿವಯೋಗಿ ಸಕಲಭೋಗಂಗಳ ಮುಟ್ಟಿಯೂ ಮುಟ್ಟದೆ ನಿರ್ಲೇಪಿಯಾಗಿರಬೇಕು. ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ ಶಿವಯೋಗಿಯೂ ಸಕಲದಲ್ಲಿ ಪರಿಪೂರ್ಣನಾಗಿರಬೇಕು; ಇಂದುವಿನಂತೆ ಶಿವಯೋಗಿ ಸಕಲದಲ್ಲಿ ಶಾಂತನಾಗಿರಬೇಕು. ಜ್ಯೋತಿ ತಮವನಳಿದು ಪ್ರಕಾಶವ ಮಾಡುವ ಹಾಂಗೆ ಶಿವಯೋಗಿಯೂ ಅವಿದ್ಯೆಯಂ ತೊಲಗಿಸಿ, ಸುವಿದ್ಯೆಯಂ ಮಾಡಬೇಕು. ಇದು ಕಾರಣ, ಸದ್ಗುರುಪ್ರಿಯ ಶಿವಸಿದ್ಧರಾಮೇಶ್ವರನ ಕರುಣವ ಹಡೆದ ಶಿವಯೋಗಿಗೆ ಇದೇ ಚಿಹ್ನವು.