Index   ವಚನ - 86    Search  
 
ಅಯ್ಯಾ, ನಿಮ್ಮ ಸತ್‍ಕೃಪೆ! ಎನ್ನ ಸುಕೃತಾಂಗಿಯ ಮಾಡಿ ಮರ್ತ್ಯಕ್ಕೆ ತಂದಿರಯ್ಯಾ. ಅಯ್ಯಾ, ನಿಮ್ಮ ಕೃಪೆಯಿಂದ ನಿಷ್ಠಾಮಾಹೇಶ್ವರನೆನಿಪ ಅಮುಗಿದೇವಯ್ಯಗಳಿಂದ ಪ್ರಭುದೇವರೆಂಬ ಅನಾದಿ ಜಂಗಮವ ಕಂಡೆನಯ್ಯಾ. ಅಯ್ಯಾ, ನಿಮ್ಮ ಪ್ರಭುದೇವರೆಂಬ ಅನಾದಿ ಜಂಗಮದಿಂದ ಪರಮ ಗುರುವಪ್ಪ ಬಸವೇಶ್ವರನ ಕಂಡೆನಯ್ಯಾ. ಆ ಬಸವಣ್ಣನಿಂದ ಅಸಂಖ್ಯಾತ ಪ್ರಮಥಗಣಂಗಳ ಕಂಡೆನಯ್ಯಾ. ಆ ಗಣಂಗಳ ಕೃಪೆಯಿಂದ ಚೆನ್ನಬಸವಣ್ಣನ ಪಡೆದು ನಿಮ್ಮನಂಗದ ಮೇಲೆ ಸಾಹಿತ್ಯವ ಮಾಡಿಕೊಂಡೆನಯ್ಯಾ. ನಿಮ್ಮ ಸಾಹಿತ್ಯದ ಪ್ರಸನ್ನಮೂರ್ತಿ ಎನ್ನ ಕಣ್ಣಮುಂದೆ ಪ್ರತ್ಯಕ್ಷವಾಗಿಪ್ಪ ಮರುಳಶಂಕರದೇವರ ಶ್ರೀಪಾದವ ಕಂಡು ನಾನು ನಿಶ್ಚಯ ಕೃತಾರ್ಥನಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥ ಪ್ರಭುವೇ, ನಿಮ್ಮ ಧರ್ಮ.