ವಚನ - 92     
 
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾಧಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದನದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ.