Index   ವಚನ - 189    Search  
 
ಆಯತವಾದ ಆರು ಗ್ರಾಮಕ್ಕೆ ಅರುವರು ತಳವಾರನಿಕ್ಕಿದ ನಮ್ಮರಸು. ಅರಸಿಂಗೆ ಕಟ್ಟಿತ್ತು ತೊಟ್ಟಿಯ ಮುಖಸಾಲೆಯ ಮಂಟಪ. ಆ ತಳವಾರರಿಗೆ ಕಟ್ಟಿತ್ತು ಕೈಸಾಲೆಯ ಮಂಟಪ. ಆ ಒಬ್ಬೊಬ್ಬ ತಳವಾರಂಗೆ ಆರಾರು ಗೆಣೆಯರ ಕೂಡಿಸಿ ಕೊಡಲು, ಆ ಗೆಣೆಯರು ತಮಗೊಬ್ಬೊಬ್ಬರಿಗೆ ಆರಾರು ಸಖರ ಕೂಡಿಕೊಂಡ ಪರಿಯ ನೋಡಾ. ಆ ಸಖರು ಆ ಗೆಣೆಯರೊಳಡಗಿ, ಆ ಗೆಣೆಯರು ಆ ತಳವಾರರೊಳಡಗಿ, ಆ ತಳವಾರರ ಕಂಡು ಅರಸು ತನ್ನ ಹೆಂಡತಿಯ ತಬ್ಬಿಕೊಂಡು ಉರಿಯ ಪೊಗಲಾಗಿ, ಎನ್ನ ಗಂಡ ಕಪಿಲಸಿದ್ಧಮಲ್ಲಿಕಾರ್ಜುನನ ನಾ ಕೇಳಲು ಬಯಲ ಬಿತ್ತಿ ಎಂದನು.