Index   ವಚನ - 489    Search  
 
ಗುರುಪಾದೋದಕವೆಂದು, ಕ್ರಿಯಾಪಾದೋದಕವೆಂದು. ಜ್ಞಾನಪಾದೋದಕವೆಂದು ಮೂರು ತೆರನುಂಟು. ಗುರುಪಾದೋದಕವೆಂದಡೆ, ಅಯ್ಯಗಳ ಪಾದಗಳ ಎರಡಂಗುಲಿಗಳಲ್ಲಿ, ಪಾದಗಳೆರಡರ ಮೂಲಾಂಗುಲಿ ಹಿಮ್ಮಡಗಳ ಅಗ್ರದಲ್ಲಿ ತನ್ನ ಪಂಚಾಂಗುಲಿಯಿಂದ ಉದಕವನದ್ದಿ, ಮಂತ್ರವಳಹುವುದೆ ಗುರುಪಾದೋದಕ. ಕ್ರಿಯಾಪಾದೋದಕವೆಂದಡೆ, ಪಾದದ್ವಯದ ಅಂಗುಲಿಗಳಲ್ಲಿ ಶಿವನ ಶಕ್ತಿಯ ಪ್ರಣವವ ಬರೆದು, ಭಸ್ಮವ ಧರಿಸಿ, ನೇತ್ರದಳಗಳ ಅರ್ಪಣಂಗೈದು, ತನ್ನ ತರ್ಜನಿಯ, ಮೂರು ವೇಳೆ ಪ್ರಣವಸಹಿತ ಪಂಚಾಕ್ಷರೀಮಂತ್ರದಿಂ ಗುರುಪಾದೋದಕವನೆದ್ದಿ ಎಳೆಯುವುದೆ ಕ್ರಿಯಾಪಾದೋದಕ. ಜ್ಞಾನಪಾದೋದಕವೆಂದಡೆ, ದಶಾಂಗುಲಿಗಳಲ್ಲಿ ದಶಪ್ರಣವ ಮಂತ್ರದಿಂದ ಭಸ್ಮದಿಂ ಲಿಖಿಸಿ, ಷೋಡಶೋಪಚಾರದಿಂ ಪೂಜೆಯ ಮಾಡಿ, ಎರಡಂಗುಲಿ ಮಧ್ಯದಲ್ಲಿ ಮೂರು ಸ್ಥಾನಂಗಳಲ್ಲಿ, ಪಂಚಾಕ್ಷರೀಮಂತ್ರದಿಂದ ಎರೆಯುವುದೆ ಜ್ಞಾನಪಾದೋದಕ. ಇಂತಪ್ಪ ಪಾದೋದಕತ್ರಯಂಗಳ ಸೇವಿಸಿ ಸುಖಿಸಬಲ್ಲಡೆ ಆತನೆ ಪರಾತ್ಪರವಸ್ತು, ಕಪಿಲಸಿದ್ಧಮಲ್ಲಿಕಾರ್ಜುನದೇವಾ.