Index   ವಚನ - 491    Search  
 
ಗುರುವಾಕ್ಯದಿಂದ ನಾರದನಿಗನಂತ ಜನ್ಮ ಪ್ರಳಯವಾಯಿತ್ತು. ಗುರುವಾಕ್ಯದಿಂದ ಚಿದ್ಘನಶಿವಾಚಾರ್ಯರಿಗೆ ಬೋಧರತ್ನ ದೊರಕಿತ್ತು. ಗುರುವಾಕ್ಯದಿಂದ ಮಳೆಯ ಮಲ್ಲೇಶಂಗೆ ಪಾತಾಳ ಪದಾರ್ಥ ಸಿದ್ಧಿಯಾಯಿತ್ತು. ಗುರುವಾಕ್ಯದಿಂದ ವೀರಸೇನಂಗೆ ರಣಭೂಮಿ ಕಂಪಿಸಿತ್ತು. ಗುರುವಾಕ್ಯದಿಂದ ಅನಂತಜನರಿಗೆ ಅನಂತಫಲಗಳಾದವು. ಗುರುವಾಕ್ಯದಿಂದ ಪ್ರಮಥರ ಮನೆಯಲ್ಲಿ ಪರಮಾತ್ಮ ಸಂಚರಿಸಿದನು. ಗುರುವಾಕ್ಯದಿಂದ ಆ ರಾಮಸಿದ್ಧನಿಗೆ ಅಘೋರಮೂರ್ತಿ ಪ್ರಾಪ್ತವಾಯಿತ್ತು. ಇದು ಕಾರಣ ಗುರುವೆ ಘನವೆಂದರಿದು ಗುರುವಾಗಿ ಗುರುಪೂಜೆಯ ಮಾಡಬೇಕಲ್ಲದೆ ಗುರುಸಮ್ಮುಖದಲ್ಲಿ ಗದ್ದುಗೆಯನೇರಿದಡೆ, ಕಪಿಲಸಿದ್ಧಮಲ್ಲಿಕಾರ್ಜುನ ಕರಸಿತಗ, ಕೇಳಾ ನಿಜಗುಣಯ್ಯಾ.