ವಚನ - 837     
 
ಭಜಿಸುವೊಡೆ ನಾನೀಗ ಭಜಕನೇ? ಅಯ್ಯಾ, ನಿಜ ನಿರ್ಮಲಾಂಗ ನೀ, ಆನಂದದಾನತದ ಕರುಣ ಕಾನನದೊಳಗೆ ಹೊಲಬುದಪ್ಪಿದ ಸೀಮೆ. ತನುತ್ರಯವ ಮಲತ್ರಯವ ದಹನಮಾಡಿ, ಮನದ ಮಧ್ಯದೊಳಗೆ ಪಂಚಮಾಳಾಪಕ್ಕೆ ತನು ಸೃಷ್ಟಿ ಸಾಯುಜ್ಯಪದವೆಯ್ದಿತು. ಅನುನಯದ ಪುರಾತ ಚರಿತವಂ ಹಾಡೀಗ ಹರುಷಿತನುವಾದೆನೈ. ಸಕಲದೊಳಗೆ ಕರುಣಾಕರನೆ ಎನ್ನ ಕರಣ ನಿರ್ಮಳತೆಯನು ಹರುಷಧಿಂ ಮಾಡಿದೈ. ಭಕ್ತಿಯಿತ್ತು ಎರಡೆಂಟು ಗ್ರಾಮದೊಳು ಕಳೆಯನಿರಿಸಿದೆ. ನಿಮ್ಮ ಮನದ ಮಧ್ಯದೊಳಗೆ ಮುಖವೈದನೂ ರಚಿಯಿಸಿದ ಭೇದವನು ಹದುಳ ಮಾಡಿಯೆ ಅರಿತೆ. ಒದವಿದೆನು ತತ್ತ್ವ ಮೂವತ್ತಾರನೂ ತನುವೆ ಮಹಾತವಕ ಘನ ಪಾಶದಿಂದತ್ತ ಮನವ ಶುದ್ಧವ ಮಾಡಿದಯ್ಯಾ, ಗುರುವೆ, ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರಾ, ಶರಣದೇಹಿಕ ದೇವ ಶರಣು ತಂದೆ.