ವಚನ - 1013     
 
ಶುದ್ಧ ಸಿದ್ಧ ಪ್ರಸಿದ್ಧ ಪಂಚಮಹಾವಾಕ್ಯಂಗಳನರಿದೆನೆಂಬ ಯೋಗಿ ಕೇಳಾ ನೀನು. ಶುದ್ಧವಾವುದು? ಸಿದ್ಧವಾವುದು? ಪ್ರಸಿದ್ಧವಾವುದು? ಹೇಳಿರೇ ಬಲ್ಲರೆ. ಪ್ರಾಣಾಯಾಮದಲಿ ಪ್ರವೇಶಿಸಬಲ್ಲಡೆ ಅದು ಶುದ್ಧ, ಪ್ರತ್ಯಾಹಾರದಲಿ ಪ್ರಕಟಿಸಬಲ್ಲಡೆ ಸಿದ್ಧ. ಪಂಚಬ್ರಹ್ಮದಲಿ ಪ್ರವೇಶಿಸಬಲ್ಲಡೆ ಪ್ರಸಿದ್ಧ. ಕೋಹಂ ತತ್ವಾರ್ಥವಂ ಮೀರಿದ, ಆಜ್ಞಾಸೀಮೆಯ ಸಮನಿಸಿದ, ಪ್ರಸಿದ್ಧಬ್ರಹ್ಮವನು ಮೀರಿದ, ಅನಾಹತವನಾನಂದವ ಮಾಡಿದ, ಆದಿಶಕ್ತಿಯ ಸಂಯೋಗವಂ ಮಾಡಿದ, ಉರುತರ ಪರಮಸೀಮೆಯಂ ದಾಂಟಿದ. ಮಾತೆಯಿಲ್ಲದ ಜಾತನ, ಗಮನವಿಲ್ಲದ ಗಮ್ಯನ, ಆ ಯಾರೂ ಅರಿಯದ ಅನಾಥನ, ಹಮ್ಮಿನ ಸೊಮ್ಮಳಿದ ನಿತ್ಯನ, ಅನಂತ ಬ್ರಹ್ಮಾಂಡವಳಿವಲ್ಲಿ ಏನೆಂದರಿಯದ ಸತ್ಯನ, ಸಕಳ ನಿಷ್ಕಳಾತ್ಮಕದಲಿ ಪೂರ್ಣನಪ್ಪ ಮುಕ್ತನ, ಬ್ರಹ್ಮಯೋಗವನರಿವರನೇಡಿಸುವ ಶಕ್ತನ, ಅವ್ವೆಯ ಮನದ ಕೊನೆಯ ಮೊನೆಯ ಮೇಲೆ ನಿತ್ಯನಾಗಿಪ್ಪ ಒಡೆಯನ, ಪ್ರಾಣಶೂನ್ಯನಪ್ಪ ಭಕ್ತಂಗೆ ಪ್ರಾಣನಾಗಿಪ್ಪ ಲಿಂಗನ, ಷಡ್ವಿಧ ಭಕ್ತಿಯಲ್ಲಿ ಸಂಯೋಗವ ಮಾಡುವ ಶರಣನ, ಇಹಪರ ಏಕವಾಗಿಪ್ಪಾತನ ತೋರಿದನೆನ್ನ ಗುರು ಬಸವಣ್ಣನ ಕಂಡೆನಾತನ ಕೊಂಡೆ, ಆತನ ಪಾದೋದಕ ಪ್ರಸಾದವ ಹಿಂದೆ ಉಂಡ ಹಂಗೆ ಇನ್ನು ಉಂಡೆನಾಯಿತ್ತಾದೊಡೆ, ಹಿಂದೆ ಬಂದ ಹಂಗೆ ಇನ್ನು ಬಂದೆನಾಯಿತ್ತಾದೊಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮಾಣೆ.